Kalanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿಯಲ್ಲಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಗ್ರಾಮೀಣ ಕೃಷಿ ಕಾರ್ಯಾನುಭವ ತರಬೇತಿ ಕಾರ್ಯಾಗಾರದ ಅಂಗವಾಗಿ ಗ್ರಾಮದ ನಕ್ಷೆ ಬಿಡಿಸಿ, ಜನರಿಗೆ ವಿವರಿಸಿದರು.
ಕಾಳನಾಯಕನಹಳ್ಳಿಯ ಗ್ರಾಮದ ಜನಸಂಖ್ಯೆ, ಜನಜೀವನ, ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿಸಾಕಾಣಿಕೆ, ಮಾವು, ಗೋಡಂಬಿ, ದಾಳಿಂಬೆ, ಸೇರಿದಂತೆ ಅಂತರ್ಜಲದ ಮಟ್ಟವನ್ನು ವೃದ್ಧಿಗೊಳಿಸುವ ವಿಧಾನ, ಕಡಿಮೆ ನೀರಿನಲ್ಲಿ ಅಧಿಕ ಇಳುವರಿಯ ಬೆಳೆಗಳು ಬೆಳೆಯುವ ವಿಧಾನ, ಸೇರಿದಂತೆ ಗ್ರಾಮದ ಸಂಪೂರ್ಣ ಚಿತ್ರಣವನ್ನು ಬಿಡಿಸಿದ್ದರು.
ರೈತರು, ಅಂತರ್ಜಲವನ್ನೆ ನಂಬಿಕೊಂಡು ಜೀವನ ರೂಪಿಸಿಕೊಂಡಿದ್ದು, ನೀರಿಗಾಗಿ ಕೊಳವೆ ಬಾವಿಗಳನ್ನೆ ಅವಲಂಬಿಸಿದ್ದಾರೆ. ಮಳೆಯ ಕೊರತೆಯಿಂದಾಗಿ, ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿರುವ ಕಾರಣ, ಬಹುತೇಕ ರೈತರು ಕೃಷಿ ಚಟುವಟಿಕೆಗಳನ್ನು ಬಿಟ್ಟುಬಿಟ್ಟಿದ್ದಾರೆ. ಆದ್ದರಿಂದ ಅಂತರ್ಜಲವನ್ನು ವೃದ್ಧಿ ಮಾಡಿಕೊಳ್ಳಬೇಕಿದೆ. ಜಲಮರುಪೂರಣ ವ್ಯವಸ್ಥೆಯನ್ನು ಕೈಗೊಳ್ಳಬೇಕಿದೆ. ಮಳೆ ನೀರು ಸಂಗ್ರಹಣೆ ಮಾಡಿಕೊಳ್ಳುವ ಮೂಲಕ ನೀರಿನ ಕೊರತೆಯನ್ನು ಸ್ವಲ್ಪಮಟ್ಟಿಗೆ ನಿವಾರಣೆ ಮಾಡಿಕೊಳ್ಳಬೇಕು. ಕೃಷಿ, ಮತ್ತು ತೋಟಗಾರಿಕೆ ಬೆಳೆಗಳಿಗೆ ಅಧಿಕವಾಗಿ ರಾಸಾಯನಿಕಗಳನ್ನು ಸಿಂಪಡಣೆ ಮಾಡುವುದರ ಬದಲಿಗೆ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ, ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂಬೆಲ್ಲಾ ಮಾಹಿತಿಗಳನ್ನು ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ನೀಡಿದರು.
ಕಾಳನಾಯಕನಹಳ್ಳಿ ಗ್ರಾಮದ ಸುತ್ತಮುತ್ತಲಿನ ಸುಮಾರು 65 ಕಿ.ಮಿ. ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ತಿಳಿಯಬೇಕಿರುವುದು ಏನೇನಿದೆ ಎನ್ನುವುದರ ಕುರಿತು, ನಕ್ಷೆಯ ಮೂಲಕ ವಿವರಿಸಿದರು. ಗ್ರಾಮಕ್ಕೆ ಬೇಕಾಗಿರುವ ಮೂಲಸೌಕರ್ಯಗಳ ಕುರಿತು, ಜನಪ್ರತಿನಿಧಿಗಳಿಗೆ ತಿಳಿಸಿಕೊಟ್ಟರು. ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಗ್ರಾಮದವರು, ವಿದ್ಯಾರ್ಥಿಗಳು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರೂ ಸಹಾ ವಿದ್ಯಾರ್ಥಿಗಳು ಬಿಡಿಸಿದ್ದ ಗ್ರಾಮದ ನಕ್ಷೆಯನ್ನು ವೀಕ್ಷಣೆ ಮಾಡಿದರು.
For Daily Updates WhatsApp ‘HI’ to 7406303366









