Kalanayakanahalli, Sidlaghatta : ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಪೋಷಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದರೊಂದಿಗೆ ಹುಟ್ಟಿದ ಊರಿಗೆ ಹೆಸರು ತರಬೇಕು ಎಂದು PLD ಬ್ಯಾಂಕಿನ ನಿರ್ದೇಶಕ ಭೀಮೇಶ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ GKVK ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ ಮಾಡುತ್ತಾ ಗ್ರಾಮಸ್ಥರ ಮನಗೆಲ್ಲುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಕೆವಿಕೆ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಕೈಗೊಂಡಿರುವ ಸೇವ ಕಾರ್ಯಗಳು ಪ್ರದರ್ಶನ ಮಾಡಲು ಇದೇ ಅಕ್ಟೋಬರ್ 8 ರಂದು ನಡೆಯಲಿರುವ ಬೆಳೆ ಕ್ಷೇತ್ರ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಕೈಗೊಂಡಿರುವ ಸೇವಾ ಕಾರ್ಯಗಳ ಕುರಿತು ವಿವರಣೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.