Home News ಹಾಲು ಸಂಗ್ರಹ, ಪೂರೈಕೆಯಲ್ಲಿ ಮಳಮಾಚನಹಳ್ಳಿ ಡೇರಿ ಮೊದಲು

ಹಾಲು ಸಂಗ್ರಹ, ಪೂರೈಕೆಯಲ್ಲಿ ಮಳಮಾಚನಹಳ್ಳಿ ಡೇರಿ ಮೊದಲು

0
Malamachanahalli Dairy top milk producer

Sidlaghatta : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾಲ್ಲೂಕಿನ ಮಳಮಾಚನಹಳ್ಳಿ ಡೇರಿಯು ಹಾಲು ಸಂಗ್ರಹ ಮತ್ತು ಪೂರೈಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ನಿತ್ಯ 3200 ಲೀಟರ್ ಹಾಲು ಸಂಗ್ರಹವಾಗುವ ಈ ಡೇರಿಯ ಪ್ರತಿ ತಿಂಗಳ ವ್ಯವಹಾರ 40 ಲಕ್ಷ ರೂಗಳಿಗೂ ಅಧಿಕ. ನೂರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿವೆ. ಹತ್ತಾರು ಪ್ರಶಸ್ತಿಗಳು ಮಳಮಾಚನಹಳ್ಳಿ ಡೇರಿಯ ಪಾಲಾಗಿವೆ.

ಜೂನ್ 1 ನೇ ತಾರೀಕು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಹುಟ್ಟಿದ ಮಗುವಿನಿಂದ ಮುದುಕರವರೆಗೂ ಎಲ್ಲ ವಯೋಮಾನದವರಿಗೂ ಹಾಲನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಉಪಯೋಗಗಳ ಬಗ್ಗೆ ವಿಶ್ವ ಹಾಲು ದಿನದಂದು ಜನ ಜಾಗೃತಿ ಮೂಡಿಸಲಾಗುತ್ತದೆ. ಹಾಲಿನ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವ ಕೆಲಸ ವಿಶ್ವ ಹಾಲು ದಿನದಂದು ಜಗತ್ತಿನಾದ್ಯಂತ ನಡೆಯಲಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಹಾಲು ಸಂಗ್ರಹಿಸಿ ಪೂರೈಸುವ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘವು ಸತತ ಹಲವು ವರ್ಷಗಳಿಂದ ಅತಿ ಹೆಚ್ಚು ಹಾಲು ಪೂರೈಸುವ ಮತ್ತು ಉತ್ತಮ ಡೇರಿಯ ಪ್ರಶಸ್ತಿಗಳನ್ನು ಪಡೆದುಕೊಂಡು ಬರುತ್ತಿದೆ.

ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧವಾದ ಶಿಡ್ಲಘಟ್ಟ ತಾಲ್ಲೂಕಿಗೆ ಮಳಮಾಚನಹಳ್ಳಿ ಡೇರಿಯ ಸಾಧನೆ ಒಂದು ತರ ಹೆಮ್ಮೆಯ ಗರಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯಲ್ಲಿ 1970 ರಲ್ಲಿ ಆರಂಭವಾದ ಹಾಲಿನ ಡೇರಿಗೆ ಇದೀಗ 55 ವರ್ಷಗಳು ತುಂಬಿವೆ. ಪ್ರತಿ ದಿನ ಈ ಡೇರಿಯಲ್ಲಿ 3200 ಲೀಟರ್ ಹಾಲು ಸಂಗ್ರಹವಾಗುತ್ತದೆ. ಮಳಮಾಚನಹಳ್ಳಿಯಲ್ಲಿ ಸುಮಾರು 300 ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿದ್ದು ಈ ಶ್ರೇಯಸ್ಸು ಈ ಗ್ರಾಮದ ರೈತ ಕುಟುಂಬಗಳಿಗೆ ಸಲ್ಲುತ್ತದೆ.

ಮಳಮಾಚನಹಳ್ಳಿ ಗ್ರಾಮದಲ್ಲಿನ ಮುಕ್ಕಾಲು ಪಾಲು ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿದ್ದು ಅದರಿಂದಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ರೇಷ್ಮೆ ಕೃಷಿ, ಕೂಲಿ ನಾಲಿ ಮಾಡುವ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಎಮ್ಮೆ ಹಸು ಕಟ್ಟಿಕೊಂಡು ಹಾಲು ಉತ್ಪಾದಿಸಿ ಡೇರಿಗೆ ಹಾಕುತ್ತಾರೆ.

1970 ರಲ್ಲಿ ಡೇರಿ ಆರಂಭವಾದಾಗ ಅಂದಿನ ಮೊದಲ ಅಧ್ಯಕ್ಷ ಎಸ್.ಕೆ.ನಾರಾಯಣಪ್ಪ ಅವರಿಂದ ಹಿಡಿದು ಈಗಿನ ಅಧ್ಯಕ್ಷ ಆರ್.ಸತೀಶ್ ಅವರವರೆಗೂ ಎಲ್ಲ ಆಡಳಿತ ಮಂಡಳಿಗಳ ಅವಧಿಯಲ್ಲಿ ಹಾಲು ಸಂಗ್ರಹ, ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಹಾಲು ಉತ್ಪಾದಕರಿಗೆ ಕಾಲ ಕಾಲಕ್ಕೆ ಬಿಲ್‌ ಗಳನ್ನು ನೀಡುವುದರಿಂದ ಹಿಡಿದು ರೈತರಿಗೆ ಅಗತ್ಯವಾದ ಬೂಸ ಹಿಂಡಿ, ಚಕ್ಕೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುವುದರಿಂದಲೂ ಡೇರಿಗೆ ಲಾಭ ಬರುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಕಳೆದ 55 ವರ್ಷಗಳಿಂದಲೂ ಡೇರಿಗೆ ಅಧ್ಯಕ್ಷರಾದವರಿಂದ ಹಿಡಿದು ಎಲ್ಲ ನಿರ್ದೇಶಕರು ಕೂಡ ರಾಜಕೀಯ ಬೆರೆಸದೆ ಸಹಕಾರ ತತ್ವದಡಿ ಆಡಳಿತ ನಡೆಸಿ ಡೇರಿಯ ಅಭಿವೃದ್ದಿಗೂ, ಹಾಲು ಉತ್ಪಾದಕರ ಶ್ರೇಯಸ್ಸಿಗೂ ಶ್ರಮಿಸಿದ ಪರಿಣಾಮ ಅಖಂಡ ಕೋಲಾರ ಜಿಲ್ಲೆಯಲ್ಲಿಯೆ ಉತ್ತಮ ಡೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಎರಡು ಜಿಲ್ಲೆಗಳಲ್ಲಿಯೆ ಅತಿ ದೊಡ್ಡದಾದ ಮೂರಂತಸ್ತಿನ ಹಾಲು ಡೇರಿ ಕಟ್ಟಡವನ್ನು ಹೊಂದಿದ್ದು, ಬೃಹತ್ ಸಭಾಂಗಣವನ್ನು ಹೊಂದಿದೆ. ಪ್ರತಿ ನಿತ್ಯ ಹಾಲು ಉತ್ಪಾದಕರಿಗೆ ಅವರು ಹಾಕಿದ ಹಾಲಿನ ಪ್ರಮಾಣ, ಗುಣಮಟ್ಟ, ಜಿಡ್ಡಿನಾಂಶ ಮತ್ತು ರೈತರಿಗೆ ಸಂದಾಯವಾಗುವ ಹಣದ ಲೆಕ್ಕ ಮೊಬೈಲ್‌ಗೆ ರವಾನೆಯಾಗುತ್ತದೆ.

ಜಿಲ್ಲೆಯಲ್ಲಿಯೆ ಅತಿ ಹೆಚ್ಚು ರೈತರನ್ನು ಯಶಸ್ವಿನಿ ಯೋಜನೆಗೆ ನೋಂದಾಯಿಸಿದ ಕೀರ್ತಿಯೂ ಮಳಮಾಚನಹಳ್ಳಿ ಡೇರಿಗೆ ಸಲ್ಲುತ್ತದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಹಾಲು ಸಂಗ್ರಹ, ಪೂರೈಕೆ ಮತ್ತು ಉತ್ತಮ ಆಡಳಿತದೊಂದಿಗೆ ಹಾಲು ಉತ್ಪಾದಕರಿಗೆ ಎಲ್ಲ ರೀತಿಯ ನೆರವು ಸಹಕಾರ ನೀಡುತ್ತಿರುವ ಮಳಮಾಚನಹಳ್ಳಿ ಡೇರಿಯು ಶಿಡ್ಲಘಟ್ಟ ತಾಲ್ಲೂಕಿಗೆ ಮುಕುಟ ಪ್ರಾಯವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version