ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ನರ್ಸರಿ ಶಾಲೆಯ ಆವರಣದಲ್ಲಿದ್ದ ಸುಮಾರು ನಲವತ್ತು ವರ್ಷಗಳಷ್ಟು ಹಳೆಯದಾದ ಬೃಹತ್ ಗಾತ್ರದ ಮಳೆಮರಗಳನ್ನು ಕೆಲವರು ಕಡಿಯುತ್ತಿದ್ದುದನ್ನು ಗ್ರಾಮಸ್ಥರು ತಡೆದಿದ್ದಾರೆ.
ಗ್ರಾಮಸ್ಥರು ನೋಡಿಕೊಳ್ಳುವಷ್ಟರಲ್ಲಾಗಲೇ ಮರದ ಹಲವು ರೆಂಬೆಗಳನ್ನು ಕಡಿಯಲಾಗಿತ್ತು. ಮರಗಳನ್ನು ಕಡಿಯುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮರ ಕಡಿಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
“ಈ ಮರಗಳೆಲ್ಲಾ ಸುಮಾರು 40 ವರ್ಷಗಳಿಗೂ ಹಿಂದಿನವು. ಇಷ್ಟು ದೊಡ್ಡ ಮರಗಳನ್ನು ಕಡಿಸಲು ಹೇಗೆ ಮನಸ್ಸು ಬರುತ್ತದೆಯೋ ತಿಳಿಯದು. ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಮಾಧ್ಯಮಿಕ ಶಾಲೆಯ ಆವರಣದಲ್ಲಿಯೂ ಇದೇ ರೀತಿ ಸುಮಾರು ಹತ್ತು ದೊಡ್ಡ ಮರಗಳನ್ನು ಕಡಿಸಿಬಿಟ್ಟಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮರ ಕಡಿಸಿದವರ ವಿರುದ್ಧ ದೂರು ದಾಖಲಿಸಿ ಶಿಕ್ಷಿಸಬೇಕು” ಎಂದು ಮಳ್ಳೂರಿನ ಅಮರ್ ತಿಳಿಸಿದರು.