Melur, Sidlaghatta : ದೇವಾಲಯಗಳು ಸಾಮರಸ್ಯ ಕೇಂದ್ರಗಳಾಗಿದ್ದು, ಅವುಗಳನ್ನು ಜೀರ್ಣೋದ್ಧಾರಗೊಳಿಸುವುದು ಸೇರಿದಂತೆ ನೂತನ ದೇವಾಲಯಗಳ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವ ಕೆಲಸವಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಸಾದ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚೌಡೇಶ್ವರಿ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ೨ ಲಕ್ಷ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ನಿರ್ಮಾಣವಾಗುವಂತಹ ಇಂತಹ ದೇವಾಲಯಗಳ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕೇವಲ ಮಹಿಳಾ ಸಬಲೀಕರಣಕ್ಕೆ ಮಾತ್ರವಲ್ಲದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ಕೈಗೊಳ್ಳುತ್ತಿದೆ. ಪಿಂಚಣಿ ಯೋಜನೆ, ದೇವಾಲಯಗಳ ಅಭಿವೃದ್ಧಿ, ಮದ್ಯವರ್ಜನ ಶಿಬಿರಗಳು, ಶೈಕ್ಷಣಿಕ ಬೆಳವಣಿಗೆಗಾಗಿ ಸಹಾಯ ಮಾಡುವುದು, ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಪ್ರಮೀಳಾವೆಂಕಟೇಶ್, ಗ್ರಾ.ಪಂ ಮಾಜಿ ಸದಸ್ಯ ಬಿ.ಸಿ.ವೆಂಕಟೇಶಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸುರೇಶ್, ಮುಖಂಡರಾದ ಜಿ.ಎನ್.ಅಶ್ವಥಪ್ಪ, ಜಿ.ವಿ.ರಾಜೇಶ್, ವೆಂಕಟರೆಡ್ಡಿ, ಪಾರ್ವತಮ್ಮ, ಪ್ರಭಾವತಿ, ಜಿ.ಎನ್.ನಿರ್ಮಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಧನಂಜಯ್, ಸೇವಾ ಪ್ರತಿನಿಧಿ ಮುನಿರತ್ನ ಮತ್ತಿತರರು ಹಾಜರಿದ್ದರು.