Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಗಳವಾರ ಶ್ರೀರಾಮ ಭಜನೆ ಮಂಡಳಿಯ ಭಕ್ತವೃಂದದಿಂದ ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯರ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರವಾದನದೊಂದಿಗೆ ಭಜನೆ ತಂಡದ ಹಾಡುಗಳ ಸಾಥದಲ್ಲಿ ದೇವರನ್ನು ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸವದಲ್ಲಿ ಭಾಗವಹಿಸಿ ಭಜನೆಗೆ ಮೆರುಗು ತಂದರು.
ಪ್ರತಿ ವರ್ಷ ಧನುರ್ಮಾಸದಲ್ಲಿ ಮೇಲೂರಿನ ಶ್ರೀರಾಮ ಭಕ್ತ ಮಂಡಳಿಯ ಸದಸ್ಯರು ಮುಂಜಾನೆ 4:30 ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡುವ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಊರಿನ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಭಕ್ತಿಯ ಮನೋಭಾವದಲ್ಲಿ ದಿನವನ್ನು ಪ್ರಾರಂಭಿಸುವುದು ಇವರ ರೂಢಿ.
ಮಹಿಳೆಯರು ಮನೆಗಳ ಮುಂದೆ ಸಾರಿಸಿ ರಂಗೋಲಿ ಬಿಡಿಸಿ, ದೇವರನ್ನು ಸ್ವಾಗತಿಸಿ ಆರತಿ ಬೆಳಗಿ ಪೂಜೆ ನೆರವೇರಿಸಿದರು. ಈ ಮಹೋತ್ಸವದಲ್ಲಿ ಸುತ್ತಮುತ್ತಲಿನ ಹಲವಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಭಜನೆ ಮಂಡಳಿಯ ನಾರಾಯಣಸ್ವಾಮಿ, ಆರ್. ಕೇಶವ, ಮಂಜುನಾಥ, ಸುಧೀರ್, ನಾಗರಾಜ, ರವಿ, ಮತ್ತು ಡಮರೇಶ್ ಈ ಸಂದರ್ಭ ಹಾಜರಿದ್ದರು.
For Daily Updates WhatsApp ‘HI’ to 7406303366









