Sidlaghatta : ರಾಜ್ಯ ಅಥವಾ ಕೇಂದ್ರ ಸರ್ಕಾರವು ಜಾರಿಗೆ ತರುವ ಪ್ರತಿ ಯೋಜನೆ, ಸವಲತ್ತು ಕೂಡ ಈ ದೇಶದ ಪ್ರತಿ ನಾಗರಿಕ ಕಟ್ಟುವ ತೆರಿಗೆ ಹಣದ್ದಾಗಿರುತ್ತದೆ. ಹಾಗಾಗಿ ಯೋಜನೆ, ಸವಲತ್ತನ್ನು ಅರ್ಹ ಫಲಾನುಭವಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ, ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಮೋಟರ್ ಪಂಪ್ ಕೇಬಲ್ ಇನ್ನಿತರೆ ಪರಿಕರಗಳು, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು.
ನಾನು ಶಾಸಕನಾಗಿ 34 ತಿಂಗಳು ಕಳೆದಿವೆ. ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ನೀಡಿದ ಅಧಿಕಾರದ ಅವಧಿಯಲ್ಲಿ ನಾನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೆ ಯೋಜನೆಯಾಗಲಿ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು.
ಹಾಗಾಗಿ ಗಂಗಾಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಏನೇ ಆಗಲಿ ಎಲ್ಲವುಗಳಲ್ಲಿ ಪಾರದರ್ಶಕತೆ ಇರಬೇಕೆಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳು, ಪಲಾನುಭವಿಗಳನ್ನು ಕರೆದು ಸ್ಥಳದಲ್ಲೆ ಪರಿಕರಗಳನ್ನು ವಿತರಿಸುತ್ತಿದ್ದೇನೆ. ಎಲ್ಲ ಪರಿಕರಗಳು ಗುಣಮಟ್ಟದ್ದಾಗಿವೆ ಎಂದು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ, ದೇವರಾಜ್ ಅರಸ್ ಅಭಿವೃದ್ದಿ ನಿಗಮ, ಆದಿಜಾಂಭವ ಅಭಿವೃದ್ದಿ ನಿಗಮದಿಂದ 19 ಮಂದಿಗೆ ಪಂಪು ಮೋಟರ್ ಪೈಪ್ ಕೇಬಲ್ ಇನ್ನಿತರೆ ಪರಿಕರಗಳು, ಸ್ವಯಂ ಉದ್ಯೋಗ ಯೋಜನೆಯಡಿ 31 ಮಂದಿಗೆ ತಲಾ 1 ಲಕ್ಷದಂತೆ 31 ಲಕ್ಷ ರೂ.ಸಾಲ, ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಆಡಳಿತಾಧಿಕಾರಿ ಪ್ರಕಾಶ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ವಿಕ್ರಮ್, ದೇವರಾಜ್ ಅರಸ್ ಅಭಿವೃದ್ದಿ ನಿಗಮದ ಭೀಮಪ್ಪ, ಶಿವು, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಹಾಜರಿದ್ದರು.








