ತಾಲ್ಲೂಕಿನ ಹೊರವಲಯದ ಹನುಮಂತಪುರದ ಬಳಿಯಿರುವ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕ (ಎಂ.ಎಸ್.ಪಿ.ಟಿ.ಸಿ) ಕ್ಕೆ ಶುಕ್ರವಾರ ದಿಡೀರ್ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.
0-6 ವರ್ಷದ ಮಕ್ಕಳು ಸೇರಿದಂತೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವಲ್ಲಿ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಅಂಗನವಾಡಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಹಾರ ಪದಾರ್ಥ ತಯಾರಿಸುವ ಘಟಕಗಳಲ್ಲಿ ವ್ಯವಸ್ಥಿತವಾದ ವಾತಾವರಣ ಮತ್ತು ಸ್ವಚ್ಚತೆಯಿರುವುದಿಲ್ಲ ಎಂಬ ಸಾರ್ವಜನಿಕರ ತಕರಾರಿದೆ. ಹಾಗಾಗಿ ಇಂದು ತಾಲ್ಲೂಕಿನ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕಕ್ಕೆ ದಿಡೀರ್ ಭೇಟಿ ನೀಡಿದ್ದೇನೆ. ಇಲ್ಲಿನ ಘಟಕದಲ್ಲಿ ಯಾವುದೇ ಸಮಸ್ಯೆಯಿಲ್ಲ, ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ ಸ್ವಚ್ಚತೆಯಿದೆ ಮತ್ತು ಇಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ತುಂಬಾ ಶಿಸ್ತಿನಿಂದ ಆಹಾರ ಪದಾರ್ಥ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ರಾಜ್ಯಾದ್ಯಂತ ಇರುವ ಎಲ್ಲಾ ಎಂಎಸ್‌ಪಿಟಿಸಿ ಘಟಕಗಳಿಗೂ ಭೇಟಿ ನೀಡುತ್ತಿದ್ದು ಸ್ವಚ್ಚತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ಸೂಚನೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸುರೇಖಾ, ಉಪನಿರ್ದೇಶಕ ನಾರಾಯಣಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ತಹಶೀಲ್ದಾರ್ ಕೆ.ಅರುಂದತಿ, ಸಿಡಿಪಿಓ ನಾಗವೇಣಿ ಹಾಜರಿದ್ದರು.