ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶಿಲನಾ ಸಭೆ ನಡೆಸಿ ಸಂಸದ ಮುನಿಸ್ವಾಮಿ ಮಾತನಾಡಿದರು.
ಕೋವಿಡ್ 19 ತಡೆಗಟ್ಟುವುದು ಎಲ್ಲರ ಮುಖ್ಯ ಕರ್ತವ್ಯವಾಗಲಿ. ರಾಜಕಾರಣ ಬಿಟ್ಟು ಕೊರೊನಾ ತಡೆಗಟ್ಟುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ರಾಮಂತರ ಪ್ರದೇಶಗಳಲ್ಲಿ ಎಲ್ಲಾ ಅಧಿಕಾರಿಗಳು, ಪಿಡಿಒ, ಅಂಗನವಾಡಿ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಎಲ್ಲರೂ ಕೈಜೋಡಿಸಿ ಕೋವಿಡ್ ನಿಯಂತ್ರಣ ಕೆಲಸಗಳನ್ನು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದ ಅನುದಾನಗಳು ಸಾರ್ವಜನಿಕರಿಗೆ ತಲಪುವಂತೆ ಆಗಬೇಕು ಎಂದರು.
ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆಯಾ ಇಲಾಖೆಯಿಂದ ವಾಟ್ಸಪ್ ಗುಂಪನ್ನು ಮಾಡಿ ಕೋವಿಡ್ ಇರುವ ಸ್ಥಳಗಳಲ್ಲಿರುವವರಿಗೆ ಅನುಕೂಲವಾಗುವ ಹಾಗೆ ಕೋವಿಡ್ ತಡೆಗಟ್ಟು ಕೆಲಸವನ್ನು ಮಾಡಬೇಕು. ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಮಯವನ್ನು ನಿಗಧಿಪಡಿಸಿ. ಆ ಮಾಹಿತಿಯಲ್ಲಿ ಎಲ್ಲರಿಗೂ ತಿಳಿಸಿ. ಯಾರಾದರು ನನಗೆ ಅವರು ಗೊತ್ತು, ಇವರು ಗೊತ್ತು ಎಂದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ.
ಕೋವಿಡ್ ನಿಂದ ಮೃತ ಪಟ್ಟರೆ ಅಂತ್ಯ ಸಂಸ್ಕಾರವನ್ನು ನಡೆಸಲು ತಂಡಗಳನ್ನು ಮಾಡಿ. ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಲಿ. ಪ್ರಧಾನ ಮಂತ್ರಿಯವರು ಪ್ರತಿ ಮನೆಗೆ ನೀರಿಗಾಗಿ ನಲ್ಲಿ ಹಾಕಿಸಬೇಕು ಎಂಬ ಕನಸು ಇದೆ. ಕೋವಿಡ್ ಮುಗಿದ ಮೇಲೆ ನರೇಗದಿಂದ ಮಾಡಲಾಗುವುದು. ಮಸೀದಿ ಹಾಗೂ ದೇವಾಲಯಗಳಲ್ಲಿ ಕೊರೊನಾ ತಡೆಗಟ್ಟುವ ವಿಚಾರವನ್ನು ಪ್ರಚಾರಮಾಡಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್ ಕುರಿತಾಗಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಿದರು. ಇದುವರೆಗೂ ತಾಲ್ಲೂಕಿನಲ್ಲಿ 58 ಪ್ರಕಣ ದಾಖಲಾಗಿದೆ. ಅದರಲ್ಲಿ 26 ಪ್ರಕರಣಗಳು ನಗರ ಹಾಗೂ ಉಳಿದಿದ್ದು ಗ್ರಾಮಾಂತರ ಪ್ರದೇಶಗಳದ್ದು ಎಂದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮಲ್ಲಿ ಯಾರಾದರೂ ಕೊವಿಡ್ ನಿಂದ ಸತ್ತರೆ ತಾಲ್ಲೂಕಿನ ಬಚ್ಚನಹಳ್ಳಿ ಗ್ರಾಮದ ಸರ್ವೆ ನಂ 32 ರಲ್ಲಿ ಸ್ಮಶಾನಕ್ಕೆ ಸ್ಥಳ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ನೀಡಿದ್ದೇವೆ. ಬಚ್ಚನಹಳ್ಳಿಯ ಆಶ್ರಮ ಶಾಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಈಗ 18 ಜನರು ಬಚ್ಚನಹಳ್ಳಿ ಕೋವಿಡ್ ಕೇಂದ್ರದಲ್ಲಿ ಇದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಬಚ್ಚನಹಳ್ಳಿಯ ಕೋವಿಡ್ ಕೇರ್ ಸೆಂಟರಿನಲ್ಲಿ ಬಿಸಿ ನೀರಿನ ತೊಂದರೆ ಇದೆ. ಅದನ್ನು ಸರಿಪಡಿಸಿದ ನಂತರ ಅಲ್ಲಿ ಕೋವಿಡ್ ವ್ಯಕ್ತಿಗಳನ್ನು ಬಿಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ತಹಶೀಲ್ದಾರ್ ಕೆ.ಅರುಂಧತಿ, ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಿ.ವೈ.ಎಸ್.ಪಿ ಡಿ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರ ಸಭೆ ಪೌರಾಯುಕ್ತ ಶ್ರೀನಿವಾಸ್, ಕೋವಿಡ್ ನೋಡಲ್ ಅಧಿಕಾರಿ ಶಿವಕುಮಾರ್ ಹಾಜರಿದ್ದರು.