Sidlaghatta : ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವುದರ ಜೊತೆಗೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಿದಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಸಾಧ್ಯ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ ಬರಲದಿನ್ನೆ ಹೇಳಿದರು.
In English: Sericulture Department Deputy Director Marappa Baraladinne urged silk farmers to focus more on Bi-Voltine cocoon production to meet strong global demand, speaking at a “Nanna Reshme, Nanna Hemme” farmer training and dialogue programme organised by the Central Silk Board at Hemarlahalli’s milk producers’ cooperative hall.
ತಾಲ್ಲೂಕಿನ ಜಂಗಮಕೋಟೆ ತಾಂತ್ರಿಕ ಸೇವಾ ಕೇಂದ್ರ ವ್ಯಾಪ್ತಿಯ ಹೇಮಾರ್ಲಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ “ನನ್ನ ರೇಷ್ಮೆ, ನನ್ನ ಹೆಮ್ಮೆ” ರೈತರ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳಾಗಿವೆ. ಹಿಪ್ಪುನೇರಳೆ ಸೊಪ್ಪು ಹಾಗೂ ರೇಷ್ಮೆ ಹುಳುಗಳ ತಳಿಗಳಲ್ಲೂ ಗಣನೀಯ ಪ್ರಗತಿಯಾಗಿದ್ದು, ವಿವಿಧ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಂಡು ಉತ್ತಮ ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ರೈತರು ತಮ್ಮ ಅನುಭವದ ಆಧಾರದಲ್ಲಿ ಉತ್ತಮ ಬೆಳೆ ಬೆಳೆದು ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಆದರೂ ವಿವಿಧ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರೇಷ್ಮೆಗೂಡು ಉತ್ಪಾದನೆಯಾಗುತ್ತಿಲ್ಲ. ಅದರಲ್ಲೂ ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
“ಜಾಗತಿಕ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆಗೂಡು ಹಾಗೂ ಅದರಿಂದ ತಯಾರಾಗುವ ರೇಷ್ಮೆ ನೂಲಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ರೈತರು ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಅಗತ್ಯವಾದ ತರಬೇತಿ, ಮಾರ್ಗದರ್ಶನ ಹಾಗೂ ರಿಯಾಯಿತಿ ಸೌಲಭ್ಯಗಳನ್ನು ಇಲಾಖೆ ಒದಗಿಸುತ್ತಿದೆ” ಎಂದು ಹೇಳಿದರು.
ಕಾಲಕಾಲಕ್ಕೆ ನಡೆಯುವ ತರಬೇತಿ, ಸಂವಾದ ಹಾಗೂ ಕ್ಷೇತ್ರೋತ್ಸವಗಳಲ್ಲಿ ರೈತರು ಭಾಗವಹಿಸಿ ಹೊಸ ತಂತ್ರಜ್ಞಾನ ಹಾಗೂ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಉತ್ತಮ ಬೆಳೆ ಹಾಗೂ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿಪ್ಪುನೇರಳೆ ತೋಟಗಳಿಗೆ ಬಾಧಿಸುವ ನುಸಿ, ಎಲೆ ಸುರಳಿ ಕೀಟ, ಬೇರುಕೊಳೆ ರೋಗ, ಬೇರುಗಂಟು ರೋಗ ಹಾಗೂ ಎಲೆಚುಕ್ಕೆ ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಕುರಿತು ತರಬೇತಿ ನೀಡಲಾಯಿತು. ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡು ಪರಸ್ಪರ ಸಂವಾದ ನಡೆಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ, ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಮುನಿಶ್ಯಾಮಿರೆಡ್ಡಿ, ಡಾ. ಮಂಜುನಾಥ್, ಜಂಗಮಕೋಟೆ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಹರೀಶ್ ಗೌಡ, ಜಗದೇವಪ್ಪ ಗುಗ್ಗರಿ, ಮೇಲೂರು ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಎಂ.ಸಿ. ಭಾರತಿ, ಸೋಮಣ್ಣ, ಮಂಜುನಾಥ್, ಕಿಶೋರ್, ವೆಂಕಟೇಶ್ ಸೇರಿದಂತೆ ಸುತ್ತಮುತ್ತಲಿನ ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.

