
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ಘಟಕ ಮತ್ತು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಮುರಳಿ ಆನಂದ್ ಮಾತನಾಡಿದರು.
“ನೀವು ನನಗೆ ರಕ್ತ ಕೊಡಿ… ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ…” ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ್ದು ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ನೇತಾಜಿ ಅವರ 125 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಆ ಮಹಾನ್ ನಾಯಕ ರಾಷ್ಟ್ರಕ್ಕೆ ನೀಡಿದ್ದ ಸರಿಸಾಟಿಯಿಲ್ಲದ ಕೊಡುಗೆಯನ್ನು ಸ್ಮರಿಸೋಣ ಎಂದು ಅವರು ತಿಳಿಸಿದರು.
ರಾಷ್ಟ್ರಕ್ಕೆ ನೇತಾಜಿಯ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಸಲುವಾಗಿ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿ ನೀಡುವ ಸಲುವಾಗಿ ಈ ವರ್ಷದಿಂದ ಪ್ರತಿ ವರ್ಷ ಜನವರಿ 23 ರಂದು “ಪರಾಕ್ರಮ ದಿನ” ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ನೇತಾಜಿ ಅವರ ಮಾದರಿಯಲ್ಲೇ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಉದ್ದೇಶ ಇದರ ಹಿಂದಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶಪ್ರೇಮ ಮತ್ತು ಹೋರಾಟ ಮನೋಭಾವವನ್ನು ಬೆಳೆಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು. ದೇಶಭಕ್ತಿಯ ಭಾವನೆಯನ್ನು ಬೆಳೆಸಿಕೊಂಡು ರಾಷ್ಟ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ದುಡಿಯಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ಉಪನ್ಯಾಸಕರಾದ ಡಾ.ವೆಂಕಟರವಣಪ್ಪ, ಜಿ.ಕೆ. ರಮೇಶ್, ಶ್ರೀಹರಿ, ಡಾ.ವೆಂಕಟೇಶ್, ಡಾ.ನರಸಿಂಹಮೂರ್ತಿ, ಡಾ.ಉಮೇಶ್ ರೆಡ್ಡಿ, ಅಧೀಕ್ಷಕಿ ಪ್ರತಿಮಾ, ಕಾಲೇಜಿನ ರೋವರ್ ಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.