Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ 3 ತಿಂಗಳುಗಳ ಕಾಲ ವಾಸ್ತವ್ಯವಿದ್ದು, ಗ್ರಾಮದ ಕೃಷಿ ಚಿತ್ರಣವನ್ನು ದಾಖಲಿಸುತ್ತಾ, ಗ್ರಾಮಸ್ಥರೊಂದಿಗೆ ವಿವಿಧ ರೀತಿಯಲ್ಲಿ ಸಂವಾದ ನಡೆಸಿ, ತಾಂತ್ರಿಕ ಹಾಗೂ ಮಾಹಿತಿಯನ್ನು ರೈತರಿಗೆ ತಿಳಿಸುತ್ತಿದ್ದಾರೆ.
ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಗುಂಪು ಚರ್ಚಾ ಸಭೆಯನ್ನು ನಡೆಸಿ ರೈತರಿಗೆ ನಾಡೆಪ್ ಹಾಗೂ ಜಪಾನೀಸ್ ವಿಧಾನದ ಗೊಬ್ಬರ ತಯಾರಿಕೆಯ ಕುರಿತು ಮಾಹಿತಿ ನೀಡಿದರು. ಸಾವಯವ ಗೊಬ್ಬರ ಬಳಕೆಯಿಂದ ರೈತರು ತಮ್ಮ ಹೊಲಗಳಿಗೆ ಉತ್ತಮ ಪೋಷಕಾಂಶವುಳ್ಳ ಗೊಬ್ಬರವವನ್ನೇ ಬಳಸಬಹುದು ಹಾಗೂ ಎರೆಹುಳು ಗೊಬ್ಬರ ತಯಾರಿಸುವುದರಿಂದ ತಮ್ಮಲ್ಲಿ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳು ತಿಳಿಸಿದರು. ಸಾವಯವ ಗೊಬ್ಬರವನ್ನು ಬಳಸುವುದರಿಂದ ದೊರೆಯುವ ಲಾಭವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ದೀಕ್ಷಿತ, ಇಮಾಮ್, ಅನುಷಾ ಹಾಗೂ ಫಾತಿಮಾ ವಿವರಿಸಿದರು. ರೈತರೂ ತಮ್ಮ ಸಂದೇಹಗಳನ್ನು ಕೇಳಿ ,ಆಸಕ್ತಿಯನ್ನು ವ್ಯಕ್ತಪಡಿಸಿದರು.
ರೈತ ಉತ್ಪಾದಕ ಸಂಸ್ಥೆ ಮತ್ತು ಅದರ ಮಹತ್ವದ ಕುರಿತು ಸಭೆಯನ್ನು ಹಮ್ಮಿಕೊಂಡಿದ್ದರು . 10-15 ರೈತರು ಸೇರಿ ನಡೆಸುವ ಈ ರೈತ ಉತ್ಪಾದಕ ಸಂಸ್ಥೆಯ ರಚನೆ, ನೋಂದಣಿಗೆ ರೈತರು ಸಲ್ಲಿಸಬೇಕಾದ ಅರ್ಜಿ, ಇದರಿಂದ ರೈತರಿಗೆ ದೊರೆಯುವ ಲಾಭ ಹಾಗು ಸಹಾಯಧನಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡಿದರು .ಈ ಸಂಸ್ಥೆಯನ್ನು ರೈತರು ರಚಿಸುವುದರಿಂದ ಉತ್ತಮ ಮಾರುಕಟ್ಟೆ ಬೆಲೆ, ಕಡಿಮೆ ವೆಚ್ಚದಲ್ಲಿ ಗೊಬ್ಬರ, ಬಿತ್ತನೆ ಬೀಜಗಳ ಖರೀದಿ ಇತ್ಯಾದಿ ಉಪಯೋಗಗಳ ಕುರಿತು ಕೃಷಿ ವ್ಯವಹಾರ ನಿರ್ವಹಣಾ ವಿದ್ಯಾರ್ಥಿಗಳಾದ ಅಭಿಷೇಕ್, ಅಚಿಂತ್ಯ, ಅಗಸ್ಸಿ ನಿಶಾಂತ್ ಹಾಗೂ ಭಾಗ್ಯಶ್ರೀ ತಿಳಿಸಿಕೊಟ್ಟರು.