Home News ಸರ್ಕಾರಿ ಶಾಲೆಯಲ್ಲಿ ತೊಗಲುಗೊಂಬೆಯಾಟ

ಸರ್ಕಾರಿ ಶಾಲೆಯಲ್ಲಿ ತೊಗಲುಗೊಂಬೆಯಾಟ

0
sidlaghatta pendlivarahalli government school Puppetry Show

Pendlivarahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲೆ, ಗೊಂಬೆ ತಯಾರಿಕೆ, ಪುರಾಣ ಕಥೆಗಳನ್ನೊಳಗೊಂಡ ವಿಶಿಷ್ಟ ಜಾನಪದ ಕಲೆ ತೊಗಲುಗೊಂಬೆಯಾಟವನ್ನು ಮಕ್ಕಳು ನೋಡಿ ಆನಂದಿಸಿದರು. ಈ ಕಲೆಯ ಬಗ್ಗೆ ತಿಳಿದುಕೊಂಡರು.

ಚಿಂತಾಮಣಿ ತಾಲ್ಲೂಕಿನ ರಾಗುಟ್ಟಹಳ್ಳಿ ಬಳಿಯ ಬೊಮ್ಮಲಾಟಪುರದ ಶ್ರೀ ಮಾರುತಿ ತೊಗಲುಗೊಂಬೆಯಾಟ ಕಲಾತಂಡದವರು ಸರ್ಕಾರಿ ಶಾಲೆಯಲ್ಲಿ ಕಲಾ ಪ್ರದರ್ಶನವನ್ನು ನಡೆಸಿಕೊಟ್ಟಿದ್ದಲ್ಲದೆ, ಪೂರ್ವಿಕರಿಂದ ಬಂದ ಕಲೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ವಿವರಿಸಿ, ಗೊಂಬೆಗಳಿಗಾಗಿ ಆಡಿನ ಚರ್ಮವನ್ನು ತಂದು ಹೇಗೆ ಹದಮಾಡಿ ಚಿತ್ರಬರೆದು ಬಣ್ಣ ಹಚ್ಚುತ್ತೇವೆ. ಈ ಗೊಂಬೆಗಳು ಬಹಳ ವರ್ಷಗಳ ಕಾಲ ಬಾಳಿಕೆ ಬರಲು ಏನು ಕ್ರಮ ಕೈಗೊಳ್ಳುತ್ತೇವೆ ಎಂದೆಲ್ಲಾ ಮಕ್ಕಳಿಗೆ ವಿವರಿಸಿದರು.

“ನಮ್ಮ ಗ್ರಾಮದಲ್ಲಿ ಒಂದು ಸಣ್ಣ ಕೊಠಡಿಯಂಥ ಬಂಡಿಯೊಂದು ಬಂದು ನಿಂತಿತ್ತು. ಮಕ್ಕಳನ್ನು ವಿಚಾರಿಸಿದಾಗ ಬೊಮ್ಮಲಾಟದವರು ಅಂತ ಉತ್ತರಿಸಿದರು. ನನಗೆ ಹೊಳೆಯಲಿಲ್ಲ. ಸ್ವಲ್ಪ ದಿನಗಳ ನಂತರ ಮಕ್ಕಳು ಹೇಳಿದರು ತೊಗಲುಗೊಂಬೆಯಾಟದವರು ಎಂದು. ಕೂಡಲೆ ತಡಮಾಡದೆ ಸಂಬಂಧಿಸಿದವರನ್ನು ಸಂಪರ್ಕಿಸಿ ಶಾಲೆಯಲ್ಲಿ ‌ಪ್ರದರ್ಶನ ನೀಡಲು ಕೇಳಿದೆವು. ಸಾಮಾನ್ಯವಾಗಿ ರಾತ್ರಿಯ ವೇಳೆ ಬಯಲಿನಲ್ಲಿ ಗ್ರಾಮಸ್ಥರ ಮುಂದೆ ಧ್ವನಿವರ್ಧಕದೊಂದಿಗೆ ಆಟ ಆಡಿಸುವ ಕಲಾತಂಡದವರಿಗೆ ಶಾಲೆಯಲ್ಲಿ ಸಣ್ಣಕೊಠಡಿಯಲ್ಲಿ ಮಾಡುವುದು ಕಷ್ಟವೆಂದರು. ಕೊನೆಗೂ ಸಣ್ಣ ಪುಟ್ಟ ಮಾರ್ಪಾಟುಗಳೊಂದಿಗೆ ಬೆಳಗಿನ ವೇಳೆಯಲ್ಲಿ ಸಣ್ಣ ಕೊಠಡಿಯಲ್ಲಿ ನಡೆಸಿಕೊಡಲು ಒಪ್ಪಿಕೊಂಡರು” ಎಂದು ಶಿಕ್ಷಕಿ ವಿ.ಉಷಾ ತಿಳಿಸಿದರು.

“3000 ಸಾವಿರ ವರ್ಷಗಳ ಇತಿಹಾಸವಿರುವ ಈ ಪ್ರಾಚೀನ ಜಾನಪದಕಲೆ ಈಗ ಅಳಿವಿನಂಚಿನಲ್ಲಿದೆ. ಅದರಲ್ಲೂ ದೂರದರ್ಶನ, ಮೊಬೈಲ್ ಗಳ ಅಬ್ಬರದಲ್ಲಿ ಸದ್ದಿಲ್ಲದಾಗಿದೆ ಎಂದು ಭಾವಿಸಿ ನಮ್ಮ ಶಾಲೆಯ ಮಕ್ಕಳಿಗಾಗಿ ಇದನ್ನು ಆಯೋಜಿಸಲಾಯಿತು. ಹಾಗೆಯೇ ಮುಂದಿನ ಪೀಳಿಗೆಗಾಗಿ ಕಾಪಿಡಲು ಒಂದು ವೀಡಿಯೋ ಸಹ ಮಾಡಿ ನಮ್ಮ ಶಾಲೆಯ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾಯಿತು. ನಮ್ಮ ಶಾಲೆಯ ಮಕ್ಕಳಂತೂ ಸ್ವತಃ ಗೊಂಬೆಯಾಡಿಸಿ ಸಂತಸ ಪಟ್ಟರು. ದಾನಿಗಳಿಂದ 4000 ರೂಗಳನ್ನು ಸಂಗ್ರಹಿಸಿ ಕಲಾವಿದರಿಗೆ ಗೌರವ ಧನ ನೀಡಿದೆವು” ಎಂದು ಅವರು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version