Sugarutu, sidlaghatta, chikkaballapur : ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸ್ಪರ್ಧೆಗಳಿಗೆ ತಕ್ಕಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳೂ ತಂತ್ರಜ್ಞಾನಾಧಾರಿತ ಶಿಕ್ಷಣದಲ್ಲಿ ಹಿಂದಿರಬಾರದು ಎಂದು ಬೆಂಗಳೂರು ಜಲಮಂಡಳಿಯ ಸಹಾಯಕ ಎಂಜಿನಿಯರ್ ದಿನೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಾಧುನಿಕ LED ಟಿವಿ ಮತ್ತು ಗಿಡ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
“ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಲಾಖೆಯ ಜೊತೆಗೆ ಸಮುದಾಯದ ಸಹಕಾರವೂ ಅಗತ್ಯ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಭವಿಷ್ಯಕ್ಕೆ ಸಿದ್ಧರಾಗಲು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತ ತರಬೇತಿ ಶಾಲಾ ಹಂತದಲ್ಲಿಯೇ ನೀಡಬೇಕು,” ಎಂದರು.
ಕಳೆದ ಜೂನ್‌ನಲ್ಲಿ ನಡೆದ ಪರಿಸರ ದಿನಾಚರಣೆ ಸಂದರ್ಭದಲ್ಲಿ “ಹಸಿರು ಸುಗಟೂರು” ಆಂದೋಲನದಡಿ 6,000 ಗಿಡಗಳನ್ನು ವಿತರಿಸಲಾಗಿತ್ತು. ರೈತರು ತಮ್ಮ ಜಮೀನು ಮತ್ತು ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಮುಂದಿನ ಜೂನ್‌ನಲ್ಲಿ ಉತ್ತಮವಾಗಿ ಪೋಷಿಸಿದ ರೈತರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ದಿನೇಶ್ ಹೇಳಿದರು.
ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ,
“ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗುತ್ತಿದೆ. ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈಗ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅಗತ್ಯವಾದ ಕೃತಕ ಬುದ್ಧಿಮತ್ತೆ ಆಪ್‌ಗಳ ಪರಿಚಯ ಮಾಡಲಾಗುತ್ತಿದೆ,” ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಛಲ, ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ಗುರುಹಿರಿಯರ ಬಗ್ಗೆ ಗೌರವದ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಅವರು ಹೇರಳಿಸಿದರು.
ಈ ಸಂದರ್ಭದಲ್ಲಿ ನಂದಿನಿ ದಿನೇಶ್ ಅವರು ಶಾಲೆಗೆ ಅತ್ಯಾಧುನಿಕ ಎಲ್‌ಇಡಿ ಟಿವಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ, ನಂದಿನಿ, ರಾಮ್‌ಚರಣ್, ತ್ರಿಷಿಕಾ, ಶಿಕ್ಷಕರು ಬಿ. ನಾಗರಾಜು, ಟಿ.ಎಂ. ಮಧು ಮತ್ತು ಶಿಕ್ಷಕಿ ತಾಜೂನ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
