Home News ಮಾನಸಿಕ ಶಿಸ್ತು, ಗಣಿತ ಸಮಸ್ಯೆಗಳನ್ನು ಬಿಡಿಸುವ ಕಾರ್ಯಾಗಾರ

ಮಾನಸಿಕ ಶಿಸ್ತು, ಗಣಿತ ಸಮಸ್ಯೆಗಳನ್ನು ಬಿಡಿಸುವ ಕಾರ್ಯಾಗಾರ

0
Sidlaghatta Rubik's cube workshop

Sidlaghatta : ರೂಬಿಕ್ಸ್ ಕ್ಯೂಬ್‌ನಂತಹ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಗಣಿತ ಸಮಸ್ಯೆ ಬಿಡಿಸುವ ಸಾಮರ್ಥ್ಯ, ಮಾನಸಿಕ ಶಿಸ್ತು ವೃದ್ಧಿಯಾಗುತ್ತದೆ. ಮೊಬೈಲ್‌ಬಳಕೆಯಂತಹ ಚಟಗಳನ್ನು ದೂರಮಾಡಿ ಮಕ್ಕಳನ್ನು ಕಲಿಕೆಗೆ ದೂಡಲು ಚಟುವಟಿಕೆ ಆಧಾರಿತ ಕಲಿಕೆ, ಬೋಧನೆಯ ಅಗತ್ಯವಿದೆ ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ಪ್ರಜ್ಞಾ ಮ್ಯಾಥೆಮ್ಯಾಟಿಕ್ಸ್, ಟೆಕ್ ಸೇವಾ, ಸಕ್ಷಮ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಐದು ದಿನಗಳ ರೂಬಿಕ್ಸ್ ಕ್ಯೂಬ್ ತರ್ಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳ ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿಸಿ ಚುರುಕಾಗಿಡಲು, ಮಾನಸಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಬೇಕು. ಮಕ್ಕಳಿಗೆ ಗಣಿತವು ಕಷ್ಟದ ವಿಷಯವಾಗದೇ ಇಷ್ಟಪಟ್ಟು ಕಲಿಯುವಂತಾಗಬೇಕು. ಮೂಲ ವಿಜ್ಞಾನ, ಮೂಲಗಣಿತದ ಮೂಲ ಪರಿಕಲ್ಪನೆಗಳನ್ನು ಕಲಿಸಬೇಕಿದೆ. ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ, ಸಮಸ್ಯೆ ಪರಿಹರಿಸಬಲ್ಲ ಕೌಶಲಗಳು ವೃದ್ಧಿಯಾಗಲು ರೂಬಿಕ್ಸ್‌ಕ್ಯೂಬ್ ಸಹಕಾರಿಯಾಗಿವೆ ಎಂದರು.

ಟೆಕ್‌ಸೇವಾ ಸಂಸ್ಥೆಯ ಅರುಣ್‌ ಕೊತ್ಯಾರ್ ಮಾತನಾಡಿ, ಮಕ್ಕಳಲ್ಲಿ ಸಮಯಪ್ರಜ್ಞೆ, ಕಲಿಕೆಯಲ್ಲಿ ಬದ್ಧತೆ, ಪ್ರಾಮಾಣಿಕತೆಯಂತಹ ಗುಣಗಳು ಬೆಳೆಯಬೇಕು. ಚಟುವಟಿಕೆಗಳ ಮೂಲಕ ಗಣಿತವನ್ನು ಪರಿಕಲ್ಪನೆಗಳ ನಡುವೆ ಸಹಸಂಬಂಧವಿರಿಸಿ ಬೋಧಿಸಿ ಬಳಕೆಯ ಮೌಲ್ಯಗಳನ್ನು ಬೆಳೆಸಬೇಕಿದೆ. ಜ್ಞಾಪಕಶಕ್ತಿ ವೃದ್ಧಿಯಾಗಿ ಕೈ-ಕಣ್ಣುಗಳ ಸಮನ್ವಯ ಸಾಧಿಸಲು ರೂಬಿಕ್ಸ್‌ಕ್ಯೂಬ್ ತರ್ಕಶಿಬಿರ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ವಿನೋದದ ಮೂಲಕ ಗಣಿತದ ಕಲಿಕೆಯಾದರೆ ಸುಲಭ ಮತ್ತು ಶಾಶ್ವತ ಕಲಿಕೆಯಾಗುತ್ತದೆ. ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ಪ್ರಜ್ಞಾ ಮ್ಯಾಥೆಮ್ಯಾಟಿಕ್ಸ್‌ ನ ಸಂಘಟಕ ಮಹೇಶ್ ಮಾತನಾಡಿ, ರೂಬಿಕ್ಸ್ ಕ್ಯೂಬ್‌ನ್ನು ಬಿಡಿಸುವುದರಿಮದ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಗಣಿತವನ್ನೇ ಕುತೂಹಲಕಾರಿ ಜಗತ್ತನ್ನಾಗಿ ಪರಿವರ್ತಿಸಿ ಸಮರ್ಥತಂತ್ರಗಳನ್ನು ಬಳಸಿಕೊಂಡು ಗಣಿತಸಮಸ್ಯೆಗಳನ್ನು ಬಿಡಿಸುವತ್ತ ದಾರಿತೋರಬೇಕಿದೆ. ರೂಬಿಕ್ಸ್ ಕ್ಯೂಬ್ ಕೇವಲ ಆಟಿಕೆಯಾಗದೇ ಗಣಿತದ ಅನೇಕ ವಿಷಯಾಂಶಗಳನ್ನು ಕಲಿಯಲು ಸಹಾಯಕವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ತಾಲ್ಲೂಕು ಸಮನ್ವಯಶಿಕ್ಷಣ ಸಂಪನ್ಮೂಲವ್ಯಕ್ತಿ ಬಿ.ಎಂ.ಜಗದೀಶ್‌ಕುಮಾರ್, ಬಿಆರ್‌ಸಿ ಸಮನ್ವಯಾಧಿಕಾರಿ ತ್ಯಾಗರಾಜು, ನವಜೀವನಸಂಸ್ಥೆಯ ಅದ್ಯಕ್ಷ ಬೆಳ್ಳೂಟಿ ಮುನಿರಾಜು, ಟೆಕ್ ಸೇವಾಸಂಸ್ಥೆಯ ಹರ್ಷ, ನರೇಂದ್ರ, ಅಧ್ಯಾತ್ಮಿಕ ಚಿಂತಕ ಬಾಬುರಾಜೇಂದ್ರಪ್ರಸಾದ್, ಸುಂದರಾಚಾರಿ, ಸುದರ್ಶನ್, ಸಿಆರ್‌ಪಿ ರಮೇಶ್‌ಕುಮಾರ್, ಮುಖ್ಯಶಿಕ್ಷಕಿ ಗೀತಾ, ನೇತ್ರಾವತಿ, ಉಮಾದೇವಿ, ಶ್ರೀನಿವಾಸ್, ವಂದನಾ, ಎಸ್‌ಡಿಎಂಸಿ ಪದಾಧಿಕಾರಿಗಳು, ಜಂಗಮಕೋಟೆ ಸಿಅರ್‌ಸಿ ವ್ಯಾಪ್ತಿಯ ವಿವಿಧ ಶಾಲೆಗಳ 23 ವಿಶೇಷಚೇತನ ವಿದ್ಯಾರ್ಥಿಗಳು, 27 ಮಂದಿ ಸಾಮಾನ್ಯ ವಿದ್ಯಾರ್ಥಿಗಳು ಶಿಬಿರದಲ್ಲಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version