Sugaturu, Sidlaghatta : ಪೋಷಕರು ಮಕ್ಕಳಿಗೆ ಅಧ್ಯಾತ್ಮಿಕತೆ, ಮಾನವೀಯ ಮೌಲ್ಯಗಳನ್ನು ಕಲಿಸುವ ಮೂಲಕ ಮನೆಯಿಂದಲೇ ಉತ್ತಮ ವ್ಯಕ್ತಿತ್ವರೂಪಿಸಬೇಕು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರುವಾಗಬೇಕು. ಮಗುವಾಗಿದ್ದಾಗಿನಿಂದಲೇ ಶಿಸ್ತು, ಸಂಯಮ, ಭಯ, ಭಕ್ತಿ, ಹಿರಿಯರಲ್ಲಿ ಗೌರವಾದರ ಭಾವನೆಗಳನ್ನು ತುಂಬಬೇಕು ಎಂದು ಬಿಜಾಪುರದ ಶಿಕ್ಷಕ ರುದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ವಿದ್ಯಾಥಿಗಳಿಗಾಗಿ ಹಮ್ಮಿಕೊಂಡಿದ್ದ ಕೋಡಿಂಗ್ ಮೂಲಕ ಕಲಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ತರಬೇತಿ ನೀಡಿ ಮಾತನಾಡಿದರು.
ಮಕ್ಕಳಲ್ಲಿ ಸತತ ಅಭ್ಯಾಸ, ನಿರಂತರ ಅಧ್ಯಯನವಿದ್ದು ಸಾಧಕರಾಗಬೇಕು. ಪ್ರಾಚೀನ ಭಾರತದಲ್ಲಿನ ಗುರುಕುಲಗಳು ಅಧ್ಯಾತ್ಮಿಕತೆಯೊಂದಿಗೆ ವಿಜ್ಞಾನ, ಗಣಿತ, ಭಾಷೆಗಳನ್ನು ಸುಲಭವಾಗಿ ಕಲಿಸುತ್ತಿದ್ದವು. ಚಾರಿತ್ರ್ಯ ನಿರ್ಮಾಣದೊಂದಿಗೆ ಸುಸಂಸ್ಕೃತ, ಸಂಸ್ಕಾರಯುತ ಜೀವನಮೌಲ್ಯಗಳ ಕಲಿಕೆಯಾಗಬೇಕು. ಅಧ್ಯಾತ್ಮಿಕತೆಯ ಸಾಧನೆಯಿಂದ ಸ್ಮರಣೆಶಕ್ತಿ, ಕಲಿಕಾಸಕ್ತಿ, ಸಂಶೋಧನಾ ಚಿಂತನೆಯಂತಹ ಗುಣಗಳು ವೃದ್ಧಿಯಾಗುತ್ತವೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಏಕಾಗ್ರತೆ, ಅಧ್ಯಯನಶೀಲತೆ, ಸಮಯಪ್ರಜ್ಞೆ, ಇಚ್ಚಾಶಕ್ತಿ, ದೃಢನಿಲುವು, ಆತ್ಮವಿಶ್ವಾಸದಂತಹ ಗುಣಗಳು ಕಲಿಕೆಗೆ ಪ್ರೇರಣೆಯನ್ನು ಒದಗಿಸುತ್ತವೆ. ಕಲಿತದ್ದನ್ನು ಧಾರಣೆ ಮಾಡಿಕೊಂಡು ಸ್ಮರಣೆಗೆ ಪೂರಕವಾಗಿಸಿಕೊಳ್ಳಲು ನಿರಂತರವಾಗಿ ಧ್ಯಾನ, ನಿಯಮಿತ ಸತತ ಅಭ್ಯಾಸವನ್ನು ಮಾಡಬೇಕು. ಮಾದರಿ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಗುರುಹಿರಿಯರಲ್ಲಿ ಗೌರವಾದರ ಗುಣಗಳು ಮಕ್ಕಳಲ್ಲಿ ವೃದ್ಧಿಯಾಗಬೇಕು ಎಂದರು.
ರುದ್ರಸ್ವಾಮಿ ಅವರು ಅಕ್ಷರಗಳಿಗೆ ಚಿತ್ರ ಬರೆಯುವ, ಮುಖ್ಯಾಂಶಗಳನ್ನು ಕೋಡಿಂಗ್ ಮೂಲಕ ಕಲಿಯುವ, ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳುವ ವಿಧಾನಗಳನ್ನು ನಿದರ್ಶನಗಳ ಮೂಲಕ ವಿವರಿಸಿದರು. ರುದ್ರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಶಿಕ್ಷಕಿ ತಾಜೂನ್ ಹಾಜರಿದ್ದರು.