24.1 C
Sidlaghatta
Tuesday, February 10, 2026

ಸಾದಲಮ್ಮ ದೇವಾಲಯಕ್ಕೆ ಸಾವಿರ ವರ್ಷಗಳ ಇತಿಹಾಸ: ಚೋಳರ ಕಾಲದ ರಹಸ್ಯ ಬಯಲು ಮಾಡಿದ ಶಾಸನ!

- Advertisement -
- Advertisement -

Sadali, Sidlaghatta : ಸಾದಲಮ್ಮ ದೇವಿಯ ದೇವಾಲಯ ಚೋಳರ ಕಾಲಕ್ಕೇ ಇತ್ತು ಎಂಬುದಕ್ಕೆ ಈ ಶಾಸನವು ಒಂದು ಪುರಾವೆ ಆಗಿದೆ. ಇನ್ನು ಹದಿನೆಂಟು ವರ್ಷಗಳಿಗೆ ಈ ಶಾಸನವನ್ನು ಹಾಕಿಸಿ ಒಂದು ಸಾವಿರ ವರ್ಷಗಳಾಗುತ್ತವೆ. ಚೋಳರ ಕಾಲದ ಈ ಪುರಾತನ ಶಾಸನದಲ್ಲಿರುವ ತಮಿಳು ಭಾಷೆಯನ್ನು ಹಲವಾರು ವಿದ್ವಾಂಸರು ಓದಿ ಅರ್ಥೈಸಿ ಕೊಟ್ಟಿರುವುದನ್ನು ಫಲಕದ ರೂಪದಲ್ಲಿ ಬರೆಸಿ ಗ್ರಾಮಸ್ಥರಿಗೆ ನೀಡಲು ಸಂತಸವಾಗುತ್ತಿದೆ ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು.

ತಾಲ್ಲೂಕಿನ ಸಾದಲಿ ಗ್ರಾಮದ ಸಾದಲಮ್ಮನ ದೇವಸ್ಥಾನದ ಆವರಣದಲ್ಲಿ ದೇವಾಲಯದ ಸಮಿತಿ ಸದಸ್ಯರಿಗೆ ಶಾಸನದ ಪಠ್ಯದ ಫಲಕವನ್ನು ನೀಡಿ ಅವರು ಮಾತನಾಡಿದರು.

ಸಾದಲಮ್ಮನ ದೇವಸ್ಥಾನದ ಆವರಣದಲ್ಲಿ ತಮಿಳು ಶಾಸನವನ್ನು ಸಂರಕ್ಷಿಸಿ ಇಡಲಾಗಿದೆ. ಈ ಶಾಸನದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಇಲ್ಲಿಗೆ ಆಗಮಿಸುವ ಭಕ್ತರು ಓದುವಂತಾಗಬೇಕು. ಕರ್ನಾಟಕ ಇತಿಹಾಸ ಅಕಾಡೆಮಿ ಮತ್ತು ಪುರಾತತ್ವ ಇಲಾಖೆಯ ಮುಖ್ಯ ಉದ್ದೇಶ ಈ ರೀತಿಯ ಶಾಸನಗಳನ್ನು ಸಂರಕ್ಷಿಸುವುದು ಹಾಗೂ ಅದರಲ್ಲಿರುವ ಐತಿಹಾಸಿಕ ವಿವರಗಳನ್ನು ಜನರಿಗೆ ತಿಳಿಸಿಕೊಡುವುದಾಗಿದೆ. ಈ ನಿಟ್ಟಿನಲ್ಲಿ ಈ ತಮಿಳು ಶಾಸನದಲ್ಲಿರುವ ವಿಚಾರಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ, ಸಾರಾಂಶದ ರೀತಿಯಲ್ಲಿ ಒಂದು ಭಿತ್ತಿಪತ್ರವನ್ನು ಸಿದ್ಧಪಡಿಸಿದ್ದೇವೆ. ಇದನ್ನು ಇಲ್ಲಿ ಪ್ರದರ್ಶಿಸಿದಾಗ ಇಲ್ಲಿಗೆ ಆಗಮಿಸುವವರಿಗೆ ಈ ಶಾಸನದ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.

ಕ್ರಿ.ಶ.1044ನೇ ಇಸವಿಯ ಫೆಬ್ರುವರಿ ತಿಂಗಳಿನಲ್ಲಿ ಈ ತಮಿಳು ಶಾಸನವನ್ನು ಚೋಳರ ಮೊದಲನೇ ರಾಜಾಧಿರಾಜನ 26ನೇ ಆಳ್ವಿಕೆಯ ವರ್ಷದಲ್ಲಿ ಕೆತ್ತಲಾಗಿದೆ. ರಾಜಾಧಿರಾಜ ಚೋಳನ ಅಧೀನದಲ್ಲಿ ಸಾದಲಿನಾಡಿನ ಆಡಳಿತಗಾರನಾಗಿದ್ದ ಇರುಗಯ್ಯಗಾಮುಂಡನ ಮಗ ಅಳಗಿಯಚೋಳಗಾಮುಂಡನು, ಗಂಗಿಮಯ್ಯನ ಮಗ ಮಾದತ್ತಿಡಯ್ಯ ಎಂಬ ಶಿವ ಬ್ರಾಹ್ಮಣನಿಗೆ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳ ಕಾನೆಗಳಲ್ಲಿನ ಕೆಲವು ಗದ್ದೆಗಳನ್ನು ದೇವಭೋಗವಾಗಿ ಕೊಟ್ಟ ವಿವರಗಳನ್ನು ಒಳಗೊಂಡ ಶಾಸನ ಇದು. ಸಾದಲಮ್ಮ(ಪಿಡಾರಿಯಾರ್) ಮತ್ತು ಬ್ರಹ್ಮೀಶ್ವರ ದೇವರ ಸೇವೆಗಾಗಿ ಈ ದಾನವು ಆ ಬ್ರಾಹ್ಮಣರಿಗೆ ಸಂದಿದೆ. ಈ ಶಾಸನವನ್ನು ಓದಿ ಅರ್ಥೈಸಲು ನನ್ನ ಗುರುಗಳಾದ ಪ್ರೊ.ಕೆ.ಆರ್.ನರಸಿಂಹನ್. ಡಾ.ಪಿ.ವಿ.ಕೃಷ್ಣಮೂರ್ತಿ, ಕೃಷ್ಣಗಿರಿಯ ಗೋವಿಂದರಾಜ್ ನೆರವಾಗಿದ್ದಾರೆ. ಪುರಾತತ್ವ ಇಲಾಖೆಯ ವತಿಯಿಂದ ಗ್ರಾಮಾವಾರು ಸರ್ವೆ ಮಾಡುವ ಕಾರ್ಯದಲ್ಲಿ ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಸಹಕರಿಸಿದ್ದಾರೆ ಎಂದರು.

ಶಿಕ್ಷಕ ನಾಗೇಶ್ ಮಾತನಾಡಿ, ನಾವು ಚಿಕ್ಕಂದಿನಿಂದಲೂ ಈ ಕಲ್ಲಿನ ಕುರಿತಾಗಿ ನಿಗೂಢತೆಯಿತ್ತು. ನಮ್ಮ ಜನ ಇದನ್ನೂ ದೇವರ ರೀತಿಯಲ್ಲಿಯೇ ಪೂಜೆ ಮಾಡುತ್ತಾ ಬಂದಿದ್ದಾರೆ. ಪ್ರೊ.ಕೆ.ಆರ್.ನರಸಿಂಹನ್ ಮತ್ತು ಧನಪಾಲ್ ಅವರು ನಮ್ಮ ಗ್ರಾಮಕ್ಕೆ ಬಂದು ಇದು ಶಾಸನವೆಂಬುದನ್ನು ತಿಳಿಸಿ, ವಿದ್ವಾಂಸರ ನೆರವಿನೊಂದಿಗೆ ಅದರಲ್ಲಿ ಬರೆದಿರುವುದನ್ನು ಓದಿ ನಮಗೆ ತಿಳಿಸಿಕೊಟ್ಟಿದ್ದಾರೆ. ಗ್ರಾಮದ ಪೆದ್ದಗುಡಿ (ಲಕ್ಷ್ಮೀಚನ್ನಕೇಶವ ದೇವಸ್ಥಾನ) ಮತ್ತು ಸಾದಲಿಯ ಸುತ್ತಮುತ್ತ 25ಕ್ಕೂ ಹೆಚ್ಚು ವೀರಗಲ್ಲುಗಳನ್ನೂ ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!