Sidlaghatta : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನ ಶ್ರೀ ಶಂಕರಾಚಾರ್ಯ ಆಶ್ರಮದ ಶ್ರೀ ಸಾಯಿ ರುಕ್ಮಿಣಿ ಮಹಲ್ ನಲ್ಲಿ ಏಪ್ರಿಲ್ 19 ರಿಂದ 26 ರವರೆಗೆ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಚಂಡಿಕಾ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ಯಾರಡೈಸ್ ಅಂತಾರಾಷ್ಟ್ರೀಯ ಶಾಲೆ ಯ ಅಧ್ಯಕ್ಷ ಟಿ. ಮಂಜುನಾಥ ತಿಳಿಸಿದರು.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಹಸ್ರ ಚಂಡಿಕಾ ಮಹಾಯಾಗದ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ವೇದ ಪಂಡಿತರು ಶೃಂಗೇರಿಯಿಂದ ಆಗಮಿಸಿ ಸಹಸ್ರ ಚಂಡಿಕಾ ಮಹಾಯಾಗವನ್ನು ನಡೆಸಿಕೊಡಲಿದ್ದಾರೆ ಎಂದರು.
ಮೈಸೂರು ಮಹಾರಾಜರ ನಂತರ ಈ ಮಹಾಯಾಗವನ್ನು ನಮ್ಮ ಅಣ್ಣನವರಾದ ನ್ಯೂ ಬಾಲ್ಡ್ವಿನ್ ಶಾಲೆಯ ಸಂಸ್ಥಾಪಕ ಡಾ. ವೇಣುಗೋಪಾಲರವರು ಸಂಕಲ್ಪಿಸಿ ಮಾಡುತ್ತಿದ್ದಾರೆ. ಬರುವ ಭಕ್ತಾದಿಗಳಿಗೆ ಬೆಂಗಳೂರು ನಗರದ ಸುತ್ತ ಮುತ್ತ ಸೂಕ್ತ ವಸತಿ ಸೌಕರ್ಯವನ್ನು ಸಹ ಮಾಡಲಾಗುವುದು ಎಂದು ಮಂಜುನಾಥ್ ತಿಳಿಸಿದರು.
ಕೋಲಾರ ಚಿಕ್ಕಬಳ್ಳಾಪುರ ಚಿಂತಾಮಣಿ ಶ್ರೀನಿವಾಸಪುರ ಶಿಡ್ಲಘಟ್ಟ ಸೇರಿದಂತೆ ಈ ಭಾಗದಲ್ಲಿನ ಹೆಚ್ಚಿನ ಭಕ್ತರು ಚಂಡಿಕಾ ಮಹಾಯಾಗದಲ್ಲಿ ಭಾಗವಹಿಸಿ ಪುಣ್ಯಗಳಿಸಬೇಕೆಂದು ಕೋರಿದರು.
ಈ ಸಂದರ್ಭಲ್ಲಿ ಶ್ರೀ ವೀರಾಂಜನೇಯ ಬಲಿಜ ಸೇವಾ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಲಿಜ ಕುಲ ಬಾಂದವರು ಹಾಜರಿದ್ದರು.








