
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಸಮೇತ ಸೀತಾರಾಮಚಂದ್ರ ಸ್ವಾಮಿ ದೇವರ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಭಕ್ತಿಭಾವದಿಂದ ನೆರವೇರಿತು.
ಬೆಳಿಗ್ಗೆ 7 ಗಂಟೆಯಿಂದ ವಿವಿಧ ವೈದಿಕ ಪೂಜಾ–ಹೋಮ, ಧಾರ್ಮಿಕ ವಿಧಿವಿಧಾನಗಳು ಹಾಗೂ ಮಂತ್ರೋಚ್ಚಾರಣೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದೇವಸ್ಥಾನದ ಆವರಣದಲ್ಲಿ ಶ್ರೀ ಸೀತಾರಾಮಚಂದ್ರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯವನ್ನು ವೇದಪಂಡಿತರ ಸಮ್ಮುಖದಲ್ಲಿ, ಶ್ರೀ ವಿದ್ಯಾನಾರಾಯಣ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರು ಹಾಗೂ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.
ಕುಂಭಿಗಾನಹಳ್ಳಿ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಭೀಮೇಶ್, ಆರ್.ಶ್ರೀನಿವಾಸ್, ರಮೇಶ್, ರಾಮಚಂದ್ರಪ್ಪ, ಮಂಜಯ್ಯ, ಆನಂದ್ ಹಾಗೂ ಗ್ರಾಮಸ್ಥರು ಹಾಜರಿದ್ದರು.