S Devaganahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಅತಿ ದೊಡ್ಡ ಮತ್ತು ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಎನ್ನಲಾಗುವ ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ ಬುಧವಾರ ಕೋಡಿ ಹರಿದಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈ ಪ್ರಾಚೀನ ಕೆರೆ ಮತ್ತೆ ಜೀವಂತಗೊಂಡಿದ್ದು, ಸ್ಥಳೀಯರಲ್ಲಿ ಆನಂದದ ವಾತಾವರಣ ನಿರ್ಮಾಣವಾಗಿದೆ.
ತಾಲ್ಲೂಕಿನ ಉತ್ತರ ಭಾಗವು ಬೆಟ್ಟ ಗುಟ್ಟಗಳ ಸಾಲಿನಿಂದ ಕೂಡಿದ್ದು, ಸಣ್ಣಪುಟ್ಟ ಕೆರೆಗಳ ಸರಪಳಿಯಾಗಿದೆ. ಆದರೆ ಅವುಗಳ ಪೈಕಿ ಪ್ರಮುಖವಾದ ತಲಕಾಯಲಬೆಟ್ಟದ ವೆಂಕಟೇಶ್ವರ ಸಾಗರ ಮತ್ತು ರಾಮಸಮುದ್ರ ಕೆರೆ ಮಾತ್ರ ದೊಡ್ಡ ಪ್ರಮಾಣದ ನೀರು ಸಂಗ್ರಹಿಸಬಲ್ಲುವವು. ಈ ಬಾರಿ ಸಣ್ಣ ಕೆರೆಗಳು ಮೊದಲೇ ಕೋಡಿ ಹರಿದಿದ್ದರೂ, ರಾಮಸಮುದ್ರ ಕೆರೆಯ ಕೋಡಿ ಹರಿವು ತಾಲ್ಲೂಕಿನ ಜನರಿಗೆ ವಿಶೇಷ ಸಂತೋಷ ತಂದಿದೆ.
ಇತಿಹಾಸ ಪ್ರಕಾರ, ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ಕಾಲದಲ್ಲಿ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮಾರ್ಗದರ್ಶನದಲ್ಲಿ ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಲಾದ ರಾಮಸಮುದ್ರ ಕೆರೆ ಸುಮಾರು 900 ಎಕರೆಯ ಅಚ್ಚುಕಟ್ಟನ್ನು ಹೊಂದಿದೆ.
ಈ ಕೆರೆ ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕುಗಳ ಗಡಿಯಲ್ಲಿ ನೆಲಸಿದ್ದು, ಸುಮಾರು 800 ಎಕರೆ ಶಿಡ್ಲಘಟ್ಟ ಭಾಗದಲ್ಲಿದ್ದು, ಉಳಿದ 100 ಎಕರೆ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿದೆ.
ಅಷ್ಟು ವಿಶಾಲವಾದ ಈ ಕೆರೆ ಸುತ್ತಮುತ್ತಲಿನ ಏಳುಕ್ಕೂ ಹೆಚ್ಚು ಗ್ರಾಮಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಕೃಷಿ ನೀರಿನ ಆಶಾಕಿರಣವಾಗಿದೆ.







