
Sidlaghatta : ನೇಪಾಳದ ಕಠ್ಮಂಡುವಿನಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಟಾರ್ಗೆಟ್ ಬಾಲ್ ಅಚೀವರ್ಸ್ ಕಪ್ 2026 ನಲ್ಲಿ ಭೂತಾನ್ ದೇಶದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಆ ತಂಡದಲ್ಲಿ ಶಿಡ್ಲಘಟ್ಟದ ಎ.ಪವನ್ ಕುಮಾರ್ ದೇಶವನ್ನು ಪ್ರತಿನಿಧಿಸಿದ್ದಾರೆ.
ಶಿಡ್ಲಘಟ್ಟದ ಅಂಜನಾದ್ರಿ ಬಡಾವಣೆಯ ವಾಸಿ ಆರ್.ಅನಿಲ್ ಕುಮಾರ್ ಮತ್ತು ಮೀನಾಕ್ಷಿ ದಂಪತಿಯ ಮಗ ಎ.ಪವನ್ ಕುಮಾರ್ ರಾಜ್ಯ, ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
ನೇಪಾಳದ ಕಠ್ಮಂಡುವಿನಲ್ಲಿ ಮೇ 3 ರಿಂದ 7 ರವರೆಗೂ ನಡೆದ 3ನೇ ಅಂತರರಾಷ್ಟ್ರೀಯ ಟಾರ್ಗೆಟ್ ಬಾಲ್ ಅಚೀವರ್ಸ್ ಕಪ್ 2026 ನಲ್ಲಿ ಭಾರತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದೆ.
ಟಾರ್ಗೆಟ್ ಬಾಲ್ ಆಟ ಬ್ಯಾಸ್ಕೆಟ್ ಮಾಲ್ ಮತ್ತು ಹ್ಯಾಂಡ್ ಬಾಲ್ ಆಟಗಳ ಸಂಕರವಾಗಿದ್ದು, ಈ ಕ್ರೀಡೆಯನ್ನು ಅಕ್ಟೋಬರ್ 8, 2012 ರಂದು ಭಾರತದ ಉತ್ತರಪ್ರದೇಶ ರಾಜ್ಯದ ಮಥುರಾ ಜಿಲ್ಲೆಯ ಡಾ.ಸೋನು ಶರ್ಮಾ ಅವರು ಮೊಟ್ಟಮೊದಲು ಪ್ರಾರಂಭಿಸಿದರು. ಒಂದು ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳಿರುವ ಈ ಆಟದಲ್ಲಿ ಟಾರ್ಗೆಟ್ ಬಾಲ್ ಅನ್ನು ಟಾರ್ಗೆಟ್ ರಿಂಗ್ ಗೆ ಎಸೆಯುವುದು ಆಟದಲ್ಲಿನ ಪ್ರಮುಖ ಅಂಶವಾಗಿದೆ.
ಶಿಡ್ಲಘಟ್ಟದ ಎ.ಪವನ್ ಕುಮಾರ್ ಶಾಲಾ ಶಿಕ್ಷಣವನ್ನು ವಾಸವಿ ವಿದ್ಯಾ ಸಂಸ್ಥೆಯಲ್ಲಿ, ಕಾಲೇಜು ಶಿಕ್ಷಣವನ್ನು ಜ್ಞಾನಜ್ಯೋತಿ ಮತ್ತು ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಾಡಿದ್ದು, ರೇವಾ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪದವಿ ಪಡೆದಿದ್ದಾರೆ.
“ನಮ್ಮ ದೇಶವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಶಿಪ್ ಗೆದ್ದಿರುವುದು ಹೆಮ್ಮೆ ಎನಿಸಿದೆ. ಇನ್ನಷ್ಟು ಸಾಧನೆ ಮಾಡಲು ಉತ್ಸಾಹ ಮೂಡಿದೆ. ನಮ್ಮ ಕೋಚ್ ಗೆ ಇದರ ಶ್ರೇಯಸ್ಸು ಸಲ್ಲುತ್ತದೆ” ಎಂದು ಎ.ಪವನ್ ಕುಮಾರ್ ತಿಳಿಸಿದರು.