Sidlaghatta : 2011ರಿಂದ 2023ರ ಮಾರ್ಚ್ ವರೆಗೆ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಮೊತ್ತ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಿಐಟಿಯು ನೇತೃತ್ವದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು, ಶಿಶು ಅಭಿವೃದ್ದಿ ಅಧಿಕಾರಿ ವಿದ್ಯಾ ವಸ್ತ್ರದ್ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, “ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ 2011ರಿಂದ ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ನೀಡಬೇಕಾಗಿದೆ. ಆದರೆ ಸರ್ಕಾರವು 2023ರ ಏಪ್ರಿಲ್‌ನ ನಂತರ ನಿವೃತ್ತರಾದವರಿಗೆ ಮಾತ್ರ ಮೊತ್ತ ಬಿಡುಗಡೆ ಮಾಡುತ್ತಿದೆ,” ಎಂದು ಖಂಡಿಸಿದರು.
ಅವರು ಮುಂದುವರಿದು, “ಸುಪ್ರೀಂ ಕೋರ್ಟ್ ಆದೇಶದಂತೆ 2011ರಿಂದಲೇ ಗ್ರಾಚ್ಯುಟಿ ಕಾಯಿದೆಯನ್ನು ಜಾರಿಗೆ ತರಬೇಕು. 2011ರಿಂದ 2023ರೊಳಗೆ ನಿವೃತ್ತರಾದ 10,311 ಕಾರ್ಯಕರ್ತೆ ಮತ್ತು 11,980 ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕೆಂಬುದು ನಮ್ಮ ಬೇಡಿಕೆ. ಸರ್ಕಾರ 193 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದರೂ, ಇನ್ನೂ ಹಣ ಬಿಡುಗಡೆ ಆಗಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಸಂಘದ ಕಾರ್ಯಕರ್ತೆಯರು ಸಿಡಿಪಿಒ (CDPO) ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ಅನುದಾನ ಬಿಡುಗಡೆ ಮಾಡಿ ನಿವೃತ್ತ ನೌಕರರಿಗೆ ಗ್ರಾಚ್ಯುಟಿ ನೀಡಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷ ಶಾಂತಮ್ಮ ಗೌರಮ್ಮ ಜಂಟಿ ಕಾರ್ಯದರ್ಶಿ ಭಾಗ್ಯಮ್ಮ ಮುಖಂಡರಾದ ಸುನಂದ, ನಿವೃತ್ತ ಸಿಬ್ಬಂದಿಗಳಾದ ರಾಮ ಲಕ್ಷ್ಮಮ್ಮ ಶಾಂತಮ್ಮ ಗೀತಾಬಾಯಿ ಹಾಜರಿದ್ದರು.
For Daily Updates WhatsApp ‘HI’ to 7406303366









