Sidlaghatta : ನನ್ನೊಂದಿಗೆ “ಬ್ಯಾಡ್ ಟಚ್” ಮಾಡಿ ಅನುಚಿತವಾಗಿ ವರ್ತಿಸಿದ್ದಾನೆಂದು ಶಿಕ್ಷಕನ ವಿರುದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಳಿ ದೂರಿರುವ ಘಟನೆ ನಡೆದಿದೆ.
ತಾಲ್ಲೂಕಿನ ಸರಕಾರಿ ಪ್ರೌಢಶಾಲೆಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಶಿಕ್ಷಕನಿಂದಾಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ.
ಶಾಲೆಗೆ ಭೇಟಿ ನೀಡಿದ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬಳಿ ಶಿಕ್ಷಕ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಬಗ್ಗೆ ವಿದ್ಯಾರ್ಥಿನಿ ವಿವರಿಸಿದ್ದಾಳೆ.
ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಯು ಶಾಲೆಗೆ ಭೇಟಿ ನೀಡಿದಾಗ ಶಾಲೆಯ ದೂರು ಪೆಟ್ಟಿಗೆ ಪರಿಶೀಲಿಸಿದ್ದು 9 ಮಂದಿ ವಿದ್ಯಾರ್ಥಿನಿಯರು ಶಿಕ್ಷಕನ ಬ್ಯಾಡ್ ಟಚ್ ವಿರುದ್ದ ಪತ್ರ ಬರೆದು ಹಾಕಿದ್ದು ಅವೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಈ ವೇಳೆ ಕೇವಲ ಒಬ್ಬ ವಿದ್ಯಾರ್ಥಿಯಲ್ಲ ಬರ್ರೋ ಬರಿ 9 ಮಂದಿ ಅಪ್ರಾಪ್ತ ವಿದ್ಯಾರ್ಥಿನಿಯರು ಕೂಡ ಶಿಕ್ಷಕನ ವಿರುದ್ದ “ಬ್ಯಾಡ್ ಟಚ್” ಆರೋಪ ಮಾಡಿರುವುದಾಗಿ ತಿಳಿದು ಬಂದಿದ್ದು ಇದು ಪೋಷಕರಲ್ಲಿ ತಲ್ಲಣ ಮೂಡಿಸಿದೆ.
ಆದರೆ ಪೋಷಕರು ಮಾತ್ರ ತಮ್ಮ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ದೂರು ನೀಡಲು ಹಿಂದೇಟು ಹಾಕಿದ್ದು ಈ ಆರೋಪಿ ಸ್ಥಾನದಲ್ಲಿರುವ ಶಿಕ್ಷಕನನ್ನು ಶಾಲೆಗೆ ಕಳುಹಿಸಿದರೆ ಕೈಕಾಲು ಮರಿದು ಹಾಕುತ್ತೇವೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೆ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ.
ಸದರಿ ಶಾಲೆಗೆ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆಯ ನಾವು ಕೂಡ ಭೇಟಿ ನೀಡಿದ್ದೆವು. ಮಗುವೊಂದರ ಹೇಳಿಕೆಯನ್ನು ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಖಲಿಸಿಕೊಂಡರು. 9 ಮಕ್ಕಳ ವಿಚಾರ ನನಗೆ ಗೊತ್ತಿಲ್ಲ. ಪೋಷಕರು ದೂರು ನೀಡಲು ನಿರಾಕರಿಸಿದರು. ಮಕ್ಕಳ ಹೇಳಿಕೆ ಆಧಾರದಲ್ಲಿ ಮುಂದಿನ ಕ್ರಮವನ್ನು ಸಂಬಂಧಿಸಿದ ಇಲಾಖೆಯವರಿಂದ ಆಗಲಿದೆ.
-ನರೇಂದ್ರ ಕುಮಾರ್, ಬಿಇಒ, ಶಿಡ್ಲಘಟ್ಟ








