Sidlaghatta : ಪರಿಸರ ಸಮತೋಲನಕ್ಕೆ ತಮ್ಮದೇ ಆದ ಮಹತ್ತರ ಕೊಡುಗೆ ನೀಡುವ ಪಕ್ಷಿಗಳ ಕುರಿತು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದದ್ದು ಎಂದು ವಲಯ ಅರಣ್ಯ ಅಧಿಕಾರಿ ರಾಜೇಶ್ ಗವಾಲ್ ತಿಳಿಸಿದರು.
ಎಫ್.ಇ. ಎಸ್ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ಭದ್ರನಕೆರೆಯ ಆಸುಪಾಸಿನಲ್ಲಿ ಪಕ್ಷಿಗಳ ವೀಕ್ಷಣೆ ಮತ್ತು ಗಣತಿ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ನಾವು ನೋಡುತ್ತಿರುವ ಪ್ರಾಣಿ ಮತ್ತು ಮನುಷ್ಯನ ಸಂಘರ್ಷಗಳ ಕುರಿತು ನಾವು ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ. ನಾವು ನಮ್ಮ ದುರಾಸೆಯಿಂದ ಪಕ್ಷಿಗಳ ವಾಸ ಸ್ಥಾನವನ್ನು ನಾಶ ಮಾಡುತ್ತಿದ್ದು, ಪಕ್ಷಿ ಸಂತತಿ ಅವನತಿಗೆ ಕಾರಣವಾಗುತ್ತಿದೆ. ಇದರಿಂದ ಪರಿಸರ ಸಮತೋಲನಕ್ಕೆ ತುಂಬಾ ತೊಂದರೆ ಆಗಲಿದ್ದು ಅದರ ಪರಿಣಾಮವನ್ನು ನಾವು ಅನುಭವಿಸಬೇಕಾಗುತ್ತದೆ. ಪಕ್ಷಿಗಳು ಯಾವ ರೀತಿ ಮೊಟ್ಟೆ ಇಡುತ್ತವೆ ಹೇಗೆ ಅವು ಜೀವನ ಮಾಡುತ್ತೇವೆ ಅದಕ್ಕೆ ತೊಂದರೆಯಾಗದಂತೆ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ನಮಗೆ ಅರಿವಿರಬೇಕು. ಭದ್ರನ ಕೆರೆ ಬಳಿ ನಾವು ಸಮೀಕ್ಷೆ ಮಾಡಿದಂತೆ 168 ವಿಧದ ಪಕ್ಷಿಗಳು ಇವೆ. ಇವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಪಕ್ಷಿಗಳ ವೀಕ್ಷಣೆ, ಬರ್ಡ್ ಆಪ್ ಅನ್ನು ಬಳಸಿ ಹೇಗೆ ಪಕ್ಷಿಗಳ ಗಣತಿಯನ್ನು ಮಾಡುವುದು. ಅದರಲ್ಲಿ ಪಕ್ಷಿಗಳನ್ನು ಹೇಗೆ ಗುರುತಿಸಿ ಅವುಗಳ ಸಂಖ್ಯೆಯನ್ನು ನಮೂದಿಸಬೇಕು, ಲಾಗಿನ್ ಆಗುವ ವಿಧಾನಗಳೇನು, ಈ ಬರ್ಡ್ ಆಪ್ ಅನ್ನ ಬಳಸಿ ಪಕ್ಷಿಗಳ ನೊಂದಣಿಯನ್ನು ಮಾಡುವುದು ಹೇಗೆ ಮತ್ತು ಅದರಿಂದಾಗುವ ಉಪಯೋಗದ ಕುರಿತು ಎಫ್.ಇ.ಎಸ್ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕಿ ತುಳಸಿ ಎಲ್ಲರಿಗೂ ಮಾಹಿತಿಯನ್ನು ನೀಡಿದರು.
ಎಫ್.ಇ.ಎಸ್. ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ನಿಖತ್ ಪರ್ವೀನ್ ಮಾತನಾಡಿ, ಇಡೀ ವಿಶ್ವದಾದ್ಯಂತ ಫೆಬ್ರವರಿ 13 ರಿಂದ 16ರವರೆಗೆ ಪಕ್ಷಿಗಳ ವೀಕ್ಷಣೆ ಮತ್ತು ಗಣತಿ ಅಭಿಯಾನ ನಡೆಯುತ್ತಿದ್ದು, ಅದರ ಅಂಗವಾಗಿ ನಾವು ಕೂಡ ವಿವಿಧ ಭಾಗಿದಾರರ ಜೊತೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಪರಿಸರ ಸಮತೋಲನ ಹಾಗೂ ಕೃಷಿ ಉತ್ಪಾದಕತೆಗೆ ಹೆಚ್ಚು ನೆರವನ್ನು ನೀಡುತ್ತಿರುವ ಪಕ್ಷಿಗಳ ಕುರಿತು ಎಲ್ಲರಿಗೂ ತಿಳಿಯಪಡಿಸುವುದು ಮತ್ತು ಪಕ್ಷಿಗಳ ಸಂತತಿಯನ್ನು ರಕ್ಷಣೆ ಮಾಡುವುದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲು ಈ ಸಮೀಕ್ಷೆಯನ್ನು ಮಾಡುತ್ತಿದ್ದೇವೆ ಎಂದರು.
ಉಪ ವಲಯ ಅರಣ್ಯ ಅಧಿಕಾರಿ ಭರತ್ ಕುಮಾರ್, ಅರಣ್ಯ ಅಧಿಕಾರಿ ಲೋಕೇಶ್ ಹಾಗೂ ಎಫ್. ಇ. ಎಸ್ ಸಂಸ್ಥೆಯ ಸಿಬ್ಬಂದಿ ಎಸ್. ಜಿ. ಗೋಪಿ, ಲೀಲಾವತಿ, ವೈ. ಎನ್. ನರಸಿಂಹಪ್ಪ, ವಿಶ್ವನಾಥ್, ಎನ್.ರಮೇಶ್ ಹಾಗೂ ಸಂಪನ್ಮೂಲ ವ್ಯಕ್ತಿಗಳು ಹಾಗೂ ಗ್ರಾಮ ಪಾರಿಸಾರಿಕ ತಜ್ಞರು ಸೇರಿ ಒಟ್ಟು 52 ಜನ ಈ ಅಭಿಯಾನದಲ್ಲಿ ಭಾಗವಹಿಸಿದ್ದರು.








