20.1 C
Sidlaghatta
Tuesday, October 28, 2025

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಘಟ್ಟಕ್ಕೆ ರವಿಯಣ್ಣ – ಮೈತ್ರಿ ನಾಯಕರ ತೀರ್ಮಾನವಲ್ಲ

- Advertisement -
- Advertisement -

Sidlaghatta : ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಘಟ್ಟಕ್ಕೆ ಮತ್ತೆ ರವಿಯಣ್ಣ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿರುವುದು ಅದು ಅವರ ಪಕ್ಷದ ಅಭಿಪ್ರಾಯ, ತೀರ್ಮಾನವಾಗಿದೆಯೆ ಹೊರತು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರ ತೀರ್ಮಾನವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನಮ್ಮ ಪಕ್ಷವನ್ನು ಸಂಘಟಿಸುವಂತೆಯೆ ಜೆಡಿಎಸ್‌ನವರು ಅವರ ಪಕ್ಷವನ್ನು ಸಂಘಟಿಸುತ್ತಾರೆ. ಕುಮಾರಸ್ವಾಮಿ ಅಥವಾ ಯಾರನ್ನೇ ಆಗಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಿ ನಮ್ಮದೇನು ತಕರಾರು ಇಲ್ಲ ಎಂದರು.

ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಆಗ ಮೈತ್ರಿಯ ಸಿಎಂ ಅಭ್ಯರ್ಥಿ ಯಾರೆಂದು ಬಿಜೆಪಿ, ಜೆಡಿಎಸ್‌ ನ ಮೈತ್ರಿಯ ಹಿರಿಯ ನಾಯಕರು ನಿರ್ಧರಿಸುತ್ತಾರೆ. ಇದೀಗ ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರಾಗಿದ್ದು ಅವರ ನಾಯಕತ್ವದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲೆ ಇಲ್ಲದಂತ ಸಮಯದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಅನೇಕ ಹಿರಿಯ ನಾಯಕರು ಇದೀಗ ಸಕ್ರೀಯವಾಗಿಲ್ಲ. ಒಂದು ಕಾಲದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಜಿಲ್ಲೆಯಲ್ಲಿರುವ ಅಂತಹ ಎಲ್ಲರನ್ನೂ ಭೇಟಿ ಮಾಡಿ ಚರ್ಚಿಸಿ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಮತ್ತೆ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.

ಸಂಘಟನಾ ಪ್ರವಾಸ :

ಮೊದಲಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೆ ಹೋಬಳಿವಾರು ಪ್ರವಾಸ ಮಾಡಲಾಗುವುದು, ಮುಂದಿನ ಶುಕ್ರವಾ ಚಿಲಕಲನೇರ್ಪು ಹೋಬಳಿಯಿಂದ ಆರಂಭಿಸಿ ಎಲ್ಲ ಹೋಬಳಿವಾರು ಪ್ರವಾಸದ ನಂತರ ಅಂತಿಮವಾಗಿ ಆಗಷ್ಟ್ 3 ರಂದು ಶಿಡ್ಲಘಟ್ಟದಲ್ಲಿ ಸಂಘಟನಾ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು. ಈ ರೀತಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸಂಘಟನಾ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.

ಶಾಸಕರ ತಟಸ್ಥ ಸರಿಯಲ್ಲ :

ನಮ್ಮ ಪಕ್ಷವಾಗಲಿ ನಾನಾಗಲಿ ಕೈಗಾರಿಕೆಗಳ ವಿರೋಧಿಗಳಲ್ಲ. ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುತ್ತೇವೆ. ಜಂಗಮಕೋಟೆ ಭಾಗದಲ್ಲಿನ ಬಹುತೇಕ ಜಮೀನು ಎ ಮತ್ತು ಬಿ ವರ್ಗದ ಫಲವತ್ತಾದ ಭೂಮಿಯಾಗಿದ್ದು ಇಂತಹ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸರ್ಕಾರದ ನಿಯಮಗಳೆ ಹೇಳುತ್ತವೆ ಎಂದು ತಿಳಿಸಿದರು.

ಈ ಕ್ಷೇತ್ರದ ಶಾಸಕರು ರೈತರ ಹಿತದೃಷ್ಟಿಯಿಂದ ಕೆಐಎಡಿಬಿಯಿಂದ ಜಮೀನು ಸ್ವಾಧೀನ ವಿಚಾರವಾಗಿ ಯಾವುದಾದರೂ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿರ್ಲಿಪ್ತತೆ ಬಿಟ್ಟು ರೈತ ಪರ ನಿಲ್ಲಬೇಕಿದೆ ಎಂದು ಆಶಿಸಿದರು.

ಇಡಿ ದಾಳಿಗೆ ರಾಜಕೀಯ ಬಣ್ಣ ಬಳಿಯಬಾರದು:

ಬಾಗೇಪಲ್ಲಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಮನೆ ಕಚೇರಿಗಳ ಮೇಲಿನ ಇಡಿ ದಾಳಿಯು ಸಹಜ ಕಾನೂನು ಪ್ರಕ್ರಿಯೆಯಾಗಿದ್ದು ರಾಜಕೀಯ ಪ್ರೇರಿತವಲ್ಲ. ಸುಬ್ಬಾರೆಡ್ಡಿ ವಿರುದ್ದ ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಚುನಾವಣೆ ಸಮಯದಲ್ಲಿ ಸುಬ್ಬಾರೆಡ್ಡಿ ವಿರುದ್ಧ ಆಸ್ತಿಯ ಅಫಡಿವಿಟ್ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎರಡು ವರ್ಷ ಆಗಿದೆ.

ಅದಕ್ಕೂ ಇದೀಗ ಇಡಿ ದಾಳಿಗೂ ಸಂಬಂಧವಿಲ್ಲ. ನೀವು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಮ್ಮ ಪಕ್ಷದಲ್ಲೇ ಇರುವ ಇತರೆ ಸಚಿವ ಸ್ಥಾನದ ಆಕಾಂಕ್ಷಿಗಳೆ ನಿಮಗೆ ಸಚಿವ ಸ್ಥಾನ ತಪ್ಪಿಸುವ ಉದ್ದೇಶದಿಂದ ಇಡಿಗೆ ಮಾಹಿತಿ ಕೊಟ್ಟಿರಬಹುದಲ್ಲವೇ ? ಎಂದು ಪ್ರಶ್ನಿಸಿದರು.

ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಬೇಡ, ಇಡಿ ಕೇಳಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಿ ಕ್ಲೀನ್ ಚಿಟ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಬಿನ್ನಾಭಿಪ್ರಾಯವಿಲ್ಲ :

ಮಾಜಿ ಶಾಸಕ ಎಂ.ರಾಜಣ್ಣ ಅವರಿಗೂ ನನಗೂ ಯಾವುದೆ ರೀತಿಯ ಬಿನ್ನಾಭಿಪ್ರಾಯವಿಲ್ಲ. ಮುನಿಸೂ ಇಲ್ಲ. ಸಹಜವಾಗಿ ಅಭಿಪ್ರಾಯ ಬೇಧಗಳಿರುತ್ತವೆ. ಕೆಲವೊಂದು ಪದಾಧಿಕಾರಿಗಳ ನೇಮಕ ಇನ್ನಿತರೆ ವಿಷಯಗಳ ವಿಚಾರವಾಗಿ ಅವರ ಬೆಂಬಲಿಗರು, ನಮ್ಮ ಬೆಂಬಲಿಗರು ಮುನಿಸಿಕೊಳ್ಳುವುದುಂಟು. ನಮ್ಮಿಬ್ಬರಿಗೂ ಪಕ್ಷ ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ಇಬ್ಬರೂ ಜತೆಯಾಗಿ ನಡೆಯಲಿದ್ದೇವೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಮುಖಂಡರಾದ ಸುರೇಂದ್ರಗೌಡ, ಕನಕಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

Namma Sidlaghatta Telegram channel

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!