Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪುರಾತನ ಪ್ರಸಿದ್ಧಿ ಹೊಂದಿರುವ ಚಿಕ್ಕದಾಸರಹಳ್ಳಿಯ ಗುಟ್ಟಿನ ಮೇಲಿರುವ ಭೂನಿಳ ಸಮೇತ ಶ್ರೀ ಬ್ಯಾಟರಯಸ್ವಾಮಿ ದೇವಾಲಯದ ಪಕ್ಕದ ಪಾವನವಾದ ಕಲ್ಯಾಣಿಯನ್ನು ಟೈಟಾನ್ (Titan) ಕಂಪನಿಯ ನೆರವಿನಿಂದ ಸುಂದರವಾಗಿ ಪುನಶ್ಚೇತನ ಮಾಡಲಾಗಿದ್ದು, ಶನಿವಾರ ಅದನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು. “ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಪರಿಸರದ ರಕ್ಷಣೆ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ,” ಎಂದು ಅವರು ಹೇಳಿದರು.
ಇದೇ ರೀತಿಯ ಪ್ರಾಮಾಣಿಕ ಸಹಕಾರದೊಂದಿಗೆ ಇನ್ನೂ ಅನೇಕ ಹಳ್ಳಿಗಳಲ್ಲಿ ಹೊಂಡಗಳನ್ನು, ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಿ ಮುಂದಿನ ತಲೆಮಾರಿಗೆ ಶುದ್ಧ ನೀರಿನ ಮೂಲವಾಗಿ ಉಳಿಸಬೇಕು ಎಂದು ಹೇಳಿದರು.
ಟೈಟಾನ್ ಸಿ.ಎಸ್.ಆರ್ ಯೋಜನೆಯ ಸಿಇಒ ಎನ್.ಎಸ್. ರಾಘವನ್ ಮಾತನಾಡುತ್ತಾ, “ಇದು ನಮ್ಮ ಮೊದಲ ಕಲ್ಯಾಣಿ ಪುನಶ್ಚೇತನ ಯೋಜನೆ. ಮುಂದಿನ ವರ್ಷಗಳಿಂದ ಪ್ರತಿವರ್ಷವೂ ಒಂದು ಕಲ್ಯಾಣಿ ಪುನಶ್ಚೇತನ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
ಪರಿಸರ ಸಂಘದ ಅಧ್ಯಕ್ಷ ಆರ್.ಜಿ. ನಡದೂರ್ ಅವರು, “ಇದು ನಮ್ಮ 27 ವರ್ಷಗಳ ಸೇವಾ ಯಾತ್ರೆಯ ಭಾಗವಾಗಿದೆ. ಈಗಾಗಲೇ ಚಿಂತಾಮಣಿಯಲ್ಲಿ ಒಂದು ಕಲ್ಯಾಣಿ ಪುನಶ್ಚೇತನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಹಾಜರಾತಿ: ಟೈಟಾನ್ ಸಂಸ್ಥೆಯ ಶ್ರೀಧರ್, ಶ್ರೀಕಾಂತ್ ಸುದರ್ಶನ್, ವಿನೋದ್ ಆರ್, ತನುಜ್ ಆರ್, ಗ್ರಾಮಾಂತರ ಟ್ರಸ್ಟ್‌ನ ಗಣೇಶ್ ರಾಜ್, ಭಾಸ್ಕರ್, ಕುಮಾರಸ್ವಾಮಿ, ಸುಜಾತ, ಸತ್ಯಮೂರ್ತಿ, ದೇವಾಲಯದ ಅಧ್ಯಕ್ಷ ಬ್ಯಾಟರಾಯ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.