Chikkadasarahalli, Sidlaghatta : “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳ ನಡುವೆ ಅಭಿವೃದ್ಧಿ ವಿಚಾರವಾಗಿ ಆರೋಗ್ಯಕರ ಪೈಪೋಟಿ ನಡೆಯಬೇಕೇ ಹೊರತು, ಜಾತಿ, ಪಕ್ಷ ಅಥವಾ ವೈಯಕ್ತಿಕ ನಿಂದನೆಗಳಿಗಾಗಿ ಅಲ್ಲ,” ಎಂದು ಶಾಸಕ ಬಿ.ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗುಡ್ಡದ ಮೇಲಿರುವ ಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಬಳಕೆಗೆಂದು ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯ ಜೆಡಿಎಸ್ ಬೆಂಬಲಿತ ಸದಸ್ಯರು ತಮ್ಮ ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿದ್ದರು. ಈ ಕೊಳವೆಬಾವಿ ಹಾಗೂ ಮೋಟಾರು ಪಂಪ್ ಸೆಟ್ ಅನ್ನು ದೇವಾಲಯದ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸದರವರೆಗೆ ಎಲ್ಲರೂ ಜಾತಿ ಮತ್ತು ಪಕ್ಷದ ಹೆಸರಿನಲ್ಲಿ ಗುಂಪುಗಾರಿಕೆ ಮಾಡುತ್ತಿರುವುದು ಅಭಿವೃದ್ಧಿಗೆ ಮಾರಕವಾಗಿದೆ. ಆರೋಪ-ಪ್ರತ್ಯಾರೋಪಗಳಿಂದ ಸಮಾಜದಲ್ಲಿ ವೈಷಮ್ಯ ಬೆಳೆಯುತ್ತದೆಯೇ ವಿನಃ ಜನಸಾಮಾನ್ಯರ ಹಿತ ಕಾಯಲು ಸಾಧ್ಯವಿಲ್ಲ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಪ್ರತಿ ವರ್ಷ ಫೆಬ್ರವರಿಯ ಕದಿರಿ ಹುಣ್ಣಿಮೆಯಂದು ನಡೆಯುವ ಬ್ರಹ್ಮ ರಥೋತ್ಸವದ ವೇಳೆ ದೇವಾಲಯದ ಕಲ್ಯಾಣಿಯಲ್ಲಿ ನೀರಿಲ್ಲದೆ ತೆಪ್ಪೋತ್ಸವ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ಮಳಮಾಚನಹಳ್ಳಿ ಗ್ರಾ.ಪಂ ಸದಸ್ಯರು ಒಗ್ಗೂಡಿ ತಮ್ಮ ಕೈಯಿಂದ ಹಣ ಹಾಕಿ ಕೊಳವೆಬಾವಿ ಕೊರೆಸಿದ್ದಾರೆ. “ಈಗ ನೀರು ಸಿಕ್ಕಿದ್ದು, ಕಲ್ಯಾಣಿ ತುಂಬುತ್ತಿದೆ. ಈ ಬಾರಿ ವೈಭವದ ತೆಪ್ಪೋತ್ಸವ ನಡೆಯಲಿದೆ,” ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.
ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ ಮಾತನಾಡಿ, ಕಳೆದ 48 ವರ್ಷಗಳಿಂದ ಸಮಿತಿಯಲ್ಲಿದ್ದು ದೇವಾಲಯದ ಸೇವೆ ಮಾಡುತ್ತಿದ್ದೇನೆ. ಕಲ್ಯಾಣಿಗೆ ನೀರು ಹರಿಸಿದ ಸದಸ್ಯರ ಕಾರ್ಯ ಅತ್ಯಂತ ಪುಣ್ಯದ್ದು ಎಂದರು. ಕಾರ್ಯಕ್ರಮದಲ್ಲಿ ಪಿಡಿಒ ಶೈಲಜಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಮುನಿರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.








