Home News ಜಾತಿಗಣತಿ ಸಮೀಕ್ಷೆ: ಜನರಲ್ಲಿ ಗೊಂದಲ, ನಿಖರ ಮಾಹಿತಿ ನೀಡಲು ಹಿಂದೇಟು

ಜಾತಿಗಣತಿ ಸಮೀಕ್ಷೆ: ಜನರಲ್ಲಿ ಗೊಂದಲ, ನಿಖರ ಮಾಹಿತಿ ನೀಡಲು ಹಿಂದೇಟು

0
Sidlaghatta Caste Census Confusion

Sidlaghatta : ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ, ಸರ್ಕಾರ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆಯನ್ನು ಗ್ರಾಮಮಟ್ಟದಲ್ಲಿ ಶಿಕ್ಷಕರು ನಿಭಾಯಿಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ ಅವರು ಪರಿಶಿಷ್ಟ ಜಾತಿಗೆ ಸೇರಿದ ವಿವಿಧ ಉಪಜಾತಿಗಳ ವಿವರಗಳನ್ನು ದಾಖಲಿಸುತ್ತಿದ್ದು, ಜಾತಿ, ಉಪಜಾತಿ, ಆರ್ಥಿಕ ಹಿನ್ನಲೆ, ಮನೆಗೆ ಸೇರಿರುವ ವಸ್ತುಗಳು (ಟಿ.ವಿ., ಫ್ರಿಡ್ಜ್, ದ್ವಿಚಕ್ರ ವಾಹನ, ಕಾರು), ಕುಟುಂಬದ ಸದಸ್ಯರ ಸಂಖ್ಯೆ, ವಿದ್ಯಾರ್ಹತೆ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಿ ದಾಖಲಿಸುತ್ತಿದ್ದಾರೆ.

ಈ ಸಮಯದಲ್ಲಿ ಕೆಲ ಗ್ರಾಮಗಳಲ್ಲಿ ಜನರಲ್ಲಿ ಗೊಂದಲ ಉಂಟಾಗಿದ್ದು, ಉಪಜಾತಿಯ ವಿವರ ನೀಡಲು ಕೆಲವು ಮಾದಿಗ ಮತ್ತು ಹೊಲೆಯ ಸಮುದಾಯದವರು ಹಿಂದೇಟು ಹಾಕುತ್ತಿದ್ದಾರೆ. ಎ.ಕೆ, ಎ.ಡಿ ಅಥವಾ ಹರಿಜನ ಎಂದು ಬರೆಯಲು ಕೆಲವರು ಒತ್ತಾಯಿಸುತ್ತಿದ್ದು, ಓದಿದ ಯುವಕರೇ ಉಪಜಾತಿಯ ಕಾಲಂ ತುಂಬಲು ನೆರವಾಗುತ್ತಿರುವುದು ಕಂಡುಬರುತ್ತಿದೆ.

ಅದೇ ಸಮಯದಲ್ಲಿ, “ಮಾದಿಗ” ಅಥವಾ “ಹೊಲೆಯ” ಎಂದು ಬರೆಯಿಸಿದರೆ ಪಡಿತರ ಚೀಟಿ ರದ್ದು ಆಗುತ್ತದೆ, ಜಾತಿ ಪ್ರಮಾಣಪತ್ರಕ್ಕೆ ತೊಂದರೆ ಆಗುತ್ತದೆ, ಸರ್ಕಾರಿ ಉದ್ಯೋಗವಿರುವವರ ಕೆಲಸ ಹೋಗುತ್ತದೆ ಎಂಬ ರೀತಿಯ ಸುಳ್ಳು ಪ್ರಚಾರ ಹರಡಲಾಗುತ್ತಿವೆ. ಈ ಕಾರಣದಿಂದಾಗಿ ಹಲವರು ತಪ್ಪು ಮಾಹಿತಿ ನೀಡುತ್ತಿರುವುದು ಗಂಭೀರ ಚಿಂತೆ ಹುಟ್ಟಿಸಿದೆ.

ಈ ಗೊಂದಲ ನಿವಾರಣೆಗೆ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳು ಗ್ರಾಮಸಹಾಯಕರ ಮೂಲಕ ಅಥವಾ ಇತರ ಮೂಲಗಳಿಂದ ಸಮೀಕ್ಷೆಯ ಕುರಿತು ಜನರಲ್ಲಿ ಸ್ಪಷ್ಟತೆಯನ್ನು ಮೂಡಿಸುವ ಕಾರ್ಯ ನಡೆಸಬೇಕಿದೆ. ಗ್ರಾಮ ಪಂಚಾಯಿತಿಗಳು ಸಹ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಗ್ರ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಬೇಕಾಗಿದೆ. ಪ್ರಸ್ತುತ, ಕೆಲ ದಲಿತ ಹಾಗೂ ಸಮುದಾಯ ಸಂಘಟನೆಗಳೇ ಈ ಜವಾಬ್ದಾರಿ ಹೊತ್ತಿದ್ದು, ಸರ್ಕಾರದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.

ಸಮೀಕ್ಷೆ ಪೂರ್ಣಗೊಂಡ ನಂತರ, ಕುಟುಂಬದ ಮುಖ್ಯಸ್ಥರಿಗೆ ಸಮೀಕ್ಷೆಯಲ್ಲಿ ದಾಖಲಾದ ಮಾಹಿತಿಯ ಪ್ರತಿಯನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ. ಈ ಮೂಲಕ ಯಾವುದೇ ತಪ್ಪುಗಳಿದ್ದರೆ ಅದನ್ನು ತಿದ್ದುಪಡಿ ಮಾಡಲು ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version