
Sidlaghatta : ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 3,500 ಹೊಸ ನ್ಯಾಯಬೆಲೆ ಅಂಗಡಿಗಳನ್ನು ನೀಡಲು ಸರ್ಕಾರ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ನಗರದ ಪುರಾತನ ಶ್ರೀ ಪೂಜಮ್ಮ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, “ರಾಜ್ಯಾದ್ಯಂತ ಎಲ್ಲಾ ಆಹಾರ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಿ ಒಂದೂವರೆ ತಿಂಗಳೊಳಗೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಈಗಾಗಲೇ 20,000 ನ್ಯಾಯಬೆಲೆ ಅಂಗಡಿಗಳಿದ್ದು, ಅದಕ್ಕೆ ಹೆಚ್ಚುವರಿಯಾಗಿ 3,500 ಅಂಗಡಿಗಳನ್ನು ಸೇರಿಸಲಾಗುತ್ತದೆ” ಎಂದರು.
ಈ ನಿರ್ಧಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾವಂತರು, ನಿರುದ್ಯೋಗಿಗಳು ಮತ್ತು ಯುವಜನರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಅವರು ತಿಳಿಸಿದರು.
ತಾಲ್ಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಅನುಷ್ಠಾನ ಯೋಜನೆಗಳ ನಾಮನಿರ್ದೇಶನದ ಗೊಂದಲ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಕಾಂಗ್ರೆಸ್ ಪಕ್ಷದ ತಾಲ್ಲೂಕು ಮಟ್ಟದ ನಾಮನಿರ್ದೇಶನಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಜಿಲ್ಲಾ ಅಧ್ಯಕ್ಷರಿಗೆ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಒಗ್ಗೂಡಿಸಲು ತೋಪಡಾ ನಾಗರಾಜ್ ಮತ್ತು ಟಿ.ಕೆ. ನಟರಾಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಮುನಿಯಪ್ಪ, ಕೃಷ್ಣಪ್ಪ, ಕದಿರಪ್ಪ, ರಾಮಚಂದ್ರಪ್ಪ, ಅಜ್ಜಪ್ಪ, ಎಸ್.ಎಂ. ರಮೇಶ್, ಕೆ. ನರಸಿಂಹಮೂರ್ತಿ, ದ್ಯಾವಪ್ಪ ಹಾಗೂ ನರಸಿಂಹ (ಎನ್ಟಿಆರ್) ಮೂರ್ತಿ ಹಾಜರಿದ್ದರು.