19.1 C
Sidlaghatta
Sunday, October 26, 2025

ಜಾತಿ ಗಣತಿ ಕಾರ್ಯ – ಮಾಹಿತಿ ಸಂಗ್ರಹಣೆಗೆ ಪುನಃ ಪುನಃ ಅಧಿಕಾರಿಗಳ ಭೇಟಿ ಜನರಲ್ಲಿ ಅಸಮಾಧಾನ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ನಡೆಯುತ್ತಿರುವ ಜಾತಿ ಗಣತಿ ಕಾರ್ಯದಲ್ಲಿ ಅಸಮರ್ಪಕತೆ ಕಂಡುಬಂದಿದ್ದು, ಅಧಿಕಾರಿಗಳು ಒಂದೇ ಮನೆಗೆ 4-5 ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿಸುವುದರೊಂದಿಗೆ ಅನುಮಾನಕ್ಕೂ ಕಾರಣವಾಗಿದೆ.

ಜನರ ಮಾಹಿತಿಯನ್ನು ಸಂಗ್ರಹಿಸಲು ನೇಮಿಸಲಾದ ಗಣತಿದಾರರು ಹಾಗೂ ಅಧಿಕಾರಿಗಳು ನಿಗದಿತ ಸಮಯವಿಲ್ಲದೆ ಸಂಜೆ, ರಾತ್ರಿ ವೇಳೆಯಲ್ಲಿಯೂ ಮನೆ ಮನೆಗೆ ತೆರಳುತ್ತಿರುವುದರಿಂದ ಸಾರ್ವಜನಿಕರು ಅಸೌಕರ್ಯ ಅನುಭವಿಸುತ್ತಿದ್ದಾರೆ. ಕೆಲವರು ಗಣತಿದಾರರು ಎಂದು ಹೇಳಿಕೊಂಡು ಹಾಳೆ, ಪುಸ್ತಕ ಹಿಡಿದು ಬಂದು ಮಾಹಿತಿ ಪಡೆಯುವುದು, ಕೆಲವೊಮ್ಮೆ ರಾತ್ರಿ ವೇಳೆ ಗಣತಿದಾರರೆಂದು ಬಂದು, ಹಿಂದೆ ಮಾಡಿದವರು ಗಣತಿ ಸರಿಯಾಗಿ ಮಾಡಿಲ್ಲ, ಮತ್ತೆ ಗಣತಿ ಮಾಡಬೇಕೆಂದು ಒಂದೇ ಮಾಹಿತಿಯನ್ನು ಪುನಃ ಪುನಃ ಕೇಳುತ್ತಿರುವುದು ಜನರಲ್ಲಿ ಕಸಿವಿಸಿಯನ್ನು ಉಂಟುಮಾಡುತ್ತಿರುವುದಲ್ಲದೆ, ಗಣತಿದಾರರೆಂದು ಹೇಳಿಕೊಂಡು ಬರುವವರು ತಮ್ಮ ಗುರುತಿನ ಚೀಟಿ ಕೇಳಿದರೆ ತೋರಿಸದೆ ಇರುವುದು ಜನರ ಅನುಮಾನಗಳಿಗೂ ಕಾರಣವಾಗುತ್ತಿದೆ.

ಮಹಿಳೆಯರು ಮನೆಗಳಲ್ಲಿ ಒಬ್ಬಂಟಿಯಾಗಿ ಇರುವ ವೇಳೆ ನಿಗದಿತ ಸಮಯ ಅಥವಾ ಮಾಹಿತಿ ಇಲ್ಲದೆ ಹೀಗೆ ಮನೆಗಳಿಗೆ ವಿವರವನ್ನು ಕೇಳಲು ಬರುವುದು, ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ ಎಂದರೂ ಕೇಳದೆ ಮತ್ತೆ ವಿವರವನ್ನು ನೀಡಬೇಕು ಎಂದು ಹೆದರಿಸುವುದು ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಜಾತಿ ಗಣತಿಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ, ಉಳಿದ ಮನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಹಸೀಲ್ದಾರ್ ಗಗನ ಸಿಂಧು ಮಾಹಿತಿ ನೀಡಿದ್ದು, ಈಗಾಗಲೇ ಗಣತಿ ಮುಗಿದಿರುವ ಮನೆಗಳಿಗೆ ಪುನಃ ಪುನಃ ಗಣತಿದಾರರು ಭೇಟಿ ನೀಡುವುದು ಅಸಮರ್ಪಕತೆಯನ್ನು ತೋರಿಸುತ್ತಿದೆ.

ಏತನ್ಮಧ್ಯೆ ಶಿಡ್ಲಘಟ್ಟ ನಗರ ಭಾಗದಲ್ಲಿ, ನಗರಸಭೆಯಿಂದ ಇನ್ನೊಂದು ಗಣತಿ ನಡೆಯುತ್ತಿದೆ ಎಂದು ಯಾವುದೇ ಪೂರ್ವ ಮಾಹಿತಿ ನೀಡದೆ ಅಧಿಕಾರಿಗಳು ಮನೆ, ಮನೆಗೆ ಭೇಟಿ ಕೊಡುತ್ತಿರುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.

“ಒಮ್ಮೆಲೇ ಸಂಪೂರ್ಣ ಮಾಹಿತಿ ತೆಗೆದುಕೊಂಡು ದಾಖಲೆ ಮಾಡಬಹುದಿತ್ತು. ಆದರೆ, ಪ್ರತಿ ಬಾರಿ ಬೇರೆಯವರು ಬಂದು ಅದೇ ಪ್ರಶ್ನೆಗಳನ್ನು ಕೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ, ನಾವು ಕೆಲಸಕ್ಕೆ ಅಥವಾ ಹೊರಗೆ ಹೋದಾಗ ಮನೆಯಲ್ಲಿ ತಾಯಿ, ಪತ್ನಿ – ಹೆಂಗಸರು ಒಂಟಿಯಾಗಿ ಇರುತ್ತಾರೆ, ಹೊತ್ತು, ಗೊತ್ತು ಇಲ್ಲದೆ 8 ಗಂಟೆಯ ನಂತರವೂ ಬಂದು ಮಾಹಿತಿ ನೀಡಬೇಕೆಂದು ಒತ್ತಾಯಿಸುವುದು ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತುತ್ತದೆ. ಈಗಾಗಲೇ 3-4 ಬಾರಿ ಮಾಹಿತಿ ನೀಡಿದ್ದರೂ ನಗರಸಭೆಯಿಂದ ಎಂದು ಹೇಳಿಕೊಂಡು ಮತ್ತೆ ವಿವರ ಸಂಗ್ರಹಿಸುತ್ತಿರುವುದು ಯಾಕೆ? ಈಗ ಎಷ್ಟು ಗಣತಿ ಕಾರ್ಯಗಳು ನಡೆಯುತ್ತಿವೆ?” ಎಂದು ನಗರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಗಣತಿ ಕಾರ್ಯದಲ್ಲಿ ತಾಂತ್ರಿಕ ದೋಷಗಳು, ದಾಖಲೆಗಳ ಸಂಗ್ರಹಣೆಯಲ್ಲಿ ಅಸಂಗತತೆ ಹಾಗೂ ತರಬೇತಿ ಕೊರತೆಯೂ ಕಾರ್ಯದ ನಿಧಾನಗತಿಗೆ ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರತಿ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲು ಮಾಡುವ ಉದ್ದೇಶದಿಂದ ಗಣತಿ ಪ್ರಕ್ರಿಯೆ ನಡೆಯುತ್ತಿದ್ದರೂ, ನಿರ್ವಹಣಾ ದೋಷ, ಸುರಕ್ಷತೆಯ ಅಭಾವದಿಂದ ಸಾರ್ವಜನಿಕರ ಸಹಕಾರದ ಕುಗ್ಗುತ್ತಿರುವುದು ಆಡಳಿತಾಧಿಕಾರಿಗಳು ಗಮನ ನೀಡಬೇಕಿದೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಗಣತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!