Sidlaghatta : ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು ಇವುಗಳನ್ನು ಸರಿಪಡಿಸಿದ ನಂತರವಷ್ಟೇ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್.ರವಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದಲ್ಲಿ ನಾವು ಈವರೆಗೂ ಕಂಡರಿಯದ ಕ್ರಿಶ್ಚಿಯನ್ ಬ್ರಾಹ್ಮಣ, ವಕ್ಕಲಿಗ ಬ್ರಾಹ್ಮಣ, ಕುರುಬ ಬ್ರಾಹ್ಮಣ ಎಂದು ಸಮೀಕ್ಷೆಯ ಕಾಲಂನಲ್ಲಿ ಸೇರಿಸಿರುವುದು ನಮಗೆಲ್ಲರಿಗೂ ನೋವುಂಟು ಮಾಡಿದೆ. ಹಾಗಾಗಿ ಕೂಡಲೇ ಸಮೀಕ್ಷೆಯ ನಮೂನೆಯಲ್ಲಿ ಈ ಮೇಲ್ಕಂಡ ಉಪಜಾತಿಗಳನ್ನು ತೆಗೆದ ನಂತರವಷ್ಟೇ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಲ್ಲಿ ಸಮುದಾಯದವರು ಧರ್ಮದ ಕಾಲಂನಲ್ಲಿ “ಹಿಂದೂ” ಎಂದು, ಜಾತಿ ಕಾಲಂನಲ್ಲಿ “ಬ್ರಾಹ್ಮಣ” ಎಂತಲೂ ನಮೂದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ರಾಜ್ಯ ಸಂಘಟನಾ ಸಂಚಾಲಕ ಎಸ್.ವಿ.ನಾಗರಾಜರಾವ್, ರಾಜ್ಯ ಸಮಿತಿ ಸದಸ್ಯ ಎನ್.ಶ್ರೀಕಾಂತ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಬಿ.ಆರ್.ನಟರಾಜ್, ಖಜಾಂಚಿ ಕೃಷ್ಣಮೂರ್ತಿ, ಜಿಲ್ಲಾ ಬ್ರಾಹ್ಮಣ ಪುರೋಹಿತರ ಮತ್ತು ಆಗಮೀಕರ ಸಂಘದ ಅಧ್ಯಕ್ಷ ರಾಮಮೋಹನಶಾಸ್ತ್ರಿ, ಜಿಲ್ಲಾ ಖಜಾಂಚಿ ಎಸ್.ಸತ್ಯನಾರಾಯಣ ಹಾಜರಿದ್ದರು.