Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲರೂ ಸೇರಿ ಭಾನುವಾರದಂದು ದೇವರುಗಳ ಉತ್ಸವದ ಮೆರವಣಿಗೆಯನ್ನು ನಡೆಸಿ ಪೂಜಿಸಿ ಆರಾಧಿಸಿ ಭಕ್ತಿಭಾವದಲ್ಲಿ ಮಿಂದೆದ್ದರು.
ಕಾಡಹಳ್ಳಿಯ ಶ್ರೀಮಹೇಶ್ವರಮ್ಮ, ಚೀಮಂಗಲದ ಮುನೇಶ್ವರಸ್ವಾಮಿ ಹಾಗೂ ಶ್ರೀಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ನಂತರ ಉತ್ಸವ ಮೂರ್ತಿಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಚಿಟ್ಟಿಮೇಳ, ತಮಟೆ, ನಾದಸ್ವರ, ಡೋಲು ಇನ್ನಿತರೆ ಜನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಊರ ಅಭಿವೃದ್ದಿ ಮತ್ತು ಯುವಕರ ಏಳಿಗೆಗೆಂದು ನಡೆಸಿಕೊಂಡು ಬರುತ್ತಿರುವ ಈ ಉತ್ಸವು 9 ದಿನಗಳ ಕಾಲ ನಡೆಯಲಿದ್ದು ಕಡೆಯ ದಿನವಾದ ಇಂದು ವಿಶೇಷವಾಗಿ ಚಿಟ್ಟಿಮೇಳ, ನಾದಸ್ವರ, ಡೋಲಿನೊಂದಿಗೆ ಉತ್ಸವವು ಗಮನ ಸೆಳೆಯಿತು. ಹೆಣ್ಣು ದೇವರಿಗೆ ಮಡಿಲು ತುಂಬಿಸಿ ಕಳುಹಿಸಿಕೊಡಲಾಯಿತು. ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.