Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಮತ್ತು ಬಿಸಿಯೂಟದ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಬುಧವಾರ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಹೊರಟು ಬಸ್ ನಿಲ್ದಾಣದವರೆಗೂ ಅಂಗನವಾಡಿ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕುಳಿತ ಪ್ರತಿಭಟನಾಕಾರರು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ 50 ವರ್ಷಗಳಾಗಿವೆ. ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು, ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಹೆಚ್ಚಿಸಬೇಕು. ಎಲ್ಲ ಅಂಗನವಾಡಿ ಶಿಕ್ಷಕರು, ಸಹಾಯಕರನ್ನು ಖಾಯಂಗೊಳಿಸಬೇಕು, ಅದುವರೆಗೂ 26 ಸಾವಿರ ರೂ.ಕನಿಷ್ಠ ವೇತನ ನೀಡಬೇಕು ಮತ್ತು ನಿವೃತ್ತಿ ನಂತರ 10 ಸಾವಿರ ರೂ,ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಹೊಸದಾಗಿ ಟಿ.ಎಚ್.ಆರ್ ಮೂಲಕ ಫಲಾನುಭವಿಗಳ ಫೋಷಣ್ ಟ್ರ್ಯಾಕರ್ ಕೆಲಸಗಳಿಗೆ ಅಪ್ ಡೇಟೆಡ್ ಮೊಬೈಲ್ ಹ್ಯಾಂಡ್ ಸೆಟ್ ವಿತರಿಸಬೇಕು, ನೆಟ್ ಗಾಗಿ ವಾರ್ಷಿಕವಾಗಿ ನೀಡುತ್ತಿರುವ 2 ಸಾವಿರ ರೂಗಳನ್ನು ಇನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ತಿಂಗಳೂ ಮಗುವಿನ ಫೋಟೋವನ್ನು ಅಪ್ ಡೇಟ್ ಮಾಡುವ ಕೆಲಸವನ್ನು ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ಫೋಟೋ ಅಪ್ ಡೇಟ್ ಮಾಡಲು ಅವಕಾಶ ನೀಡಬೇಕು ಎಂದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ನೌಕರರು ಸಂಘಗಳನ್ನು ರಚಿಸುವ, ಸಂಘಟಿಸುವ ಮತ್ತು ಮುಷ್ಕರ, ಪ್ರತಿಭಟನೆ ನಡೆಸುವ ಹಕ್ಕುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ತಿದ್ದುಪಡಿ ಮಾಡುವ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೆ 2023 ಏಪ್ರಿಲ್ 1 ರಂದು 1972 ರ ಗ್ರಾಜ್ಯುಟಿ ಪಾವತಿ ಕಾಯಿದೆಗೆ ತಿದ್ದುಪಡಿ ತಂದು 287 ಕಾರ್ಯಕರ್ತೆಯರು, 1204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದ್ದು ಅದೇ ರೀತಿ 2011 ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೂ ಇದರ ಅನ್ವಯ ಗ್ರಾಜ್ಯುಟಿ ನೀಡಬೇಕೆಂದು ಮನವಿ ಮಾಡಿದರು.
ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಯಮ್ಮ, ಉಮಾ, ಪಾಪಣ್ಣ, ವೇಣುಗೋಪಾಲ್, ಬಿಸಿಯೂಟ ನೌಕರರ ಸಂಘದ ಮಂಜುಳಾ, ನಾಗರತ್ನ, ಕಲಾವತಿ ಹಾಜರಿದ್ದರು.