Sidlaghatta : ಹವಾಮಾನದ ವೈಪರಿತ್ಯ ಹಾಗೂ ವಾತಾವರಣದಲ್ಲಿ ಏರುಪೇರುವಿನ ನಡುವೆಯೇ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಏರಿಕೆ ಕಂಡಿದೆ. ರೇಷ್ಮೆ ಬೆಳೆಗಾರರೊಬ್ಬರು ಬೆಳೆದ ದ್ವಿತಳಿ ರೇಷ್ಮೆ ಗೂಡು 813 ರೂಗಳಿಗೆ ಗುರುವಾರ ಮಾರಾಟ ಮಾಡುವ ಮೂಲಕ ಈ ವರ್ಷದ ಅತ್ಯಧಿಕ ಬೆಲೆ ಎಂದು ದಾಖಲೆ ಬರೆದಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಮಾರಸಂಡಹಳ್ಳಿಯ ಕೆಂಪಣ್ಣ ಎಂಬ ರೇಷ್ಮೆ ಬೆಳೆಗಾರ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ತಾವು ಬೆಳೆದಿರುವ ಬೈವೋಲ್ಟೀನ್ ಗೂಡನ್ನು ಒಂದು ಕೇ.ಜಿ ಗೆ 813 ರೂಗಳಿಗೆ ಮಾರಾಟ ಮಾಡುವ ಮೂಲಕ ಅತ್ಯಧಿಕ ಧಾರಣೆ ಎಂಬ ದಾಖಲೆಯನ್ನು ಮಾಡಿದ್ದಾರೆ. ಅವರು 215 ಮೊಟ್ಟೆಗಳಿಂದ 207 ಕೇ.ಜಿ ರೇಷ್ಮೆ ಗೂಡನ್ನು ಬೆಳೆದು ಮಾರುಕಟ್ಟೆಗೆ ತಂದಿದ್ದರು. ಈ ಗೂಡನ್ನು ಸಯ್ಯದ್ ಇನಾಯತ್ತುಲ್ಲ ಎಂಬ ರೀಲರ್ ಖರೀದಿಸಿದ್ದಾರೆ.
ಕೋಲಾರ ತಾಲ್ಲೂಕು ಮೇಡಿಹಾಳದ ಮುರಳಿ ಎಂಬ ರೇಷ್ಮೆ ಬೆಳೆಗಾರ ತಂದಿದ್ದ ಬೈವೋಲ್ಟೀನ್ ಗೂಡು, ಒಂದು ಕೇ.ಜಿ ಗೆ 738 ರೂಗಳಿಗೆ ಮಾರಾಟವಾಗಿ ಎರಡನೇ ಅತ್ಯಧಿಕ ಬೆಲೆ ಎಂದು ದಾಖಲಾಗಿದೆ. ಅವರು 250 ಮೊಟ್ಟೆಗಳಿಂದ 225 ಕೇ.ಜಿ ರೇಷ್ಮೆ ಗೂಡನ್ನು ಬೆಳೆದು ಮಾರುಕಟ್ಟೆಗೆ ತಂದಿದ್ದರು. ಈ ಗೂಡನ್ನು ಮೆಹಬೂಬ್ ಖಾನ್ ಎಂಬ ರೀಲರ್ ಖರೀದಿಸಿದ್ದಾರೆ.
“ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬಂದು ಗೂಡು ಮಾರಾಟ ಮಾಡಿ ಅಧಿಕ ದರ ಪಡೆಯಬೇಕು, ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಮಾರಿದ ರೈತರಿಗೆ ಹಾಗೂ ಕೊಂಡ ರೀಲರಿಗೆ ಇಲಾಖೆಯ ವತಿಯಿಂದ ಪ್ರಮಾಣಪತ್ರವನ್ನು ನೀಡಿದ್ದೇವೆ” ಎಂದು ರೇಷ್ಮೆ ಉಪನಿರ್ದೇಶಕ ಎನ್.ಉಮೇಶ್ ತಿಳಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ವಿಸ್ತರಣಾಧಿಕಾರಿ ಶ್ರೀನಿವಾಸ್, ನಿರೀಕ್ಷಕರಾದ ರಮೇಶ್ ರಾಥೋಡ್, ವಿ.ಸಿ.ಬಾಬು, ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರುಗಳಾದ ಫೈರೋಸ್ ಪಾಷ, ನಬೀ ಹಾಜರಿದ್ದರು.