
Sidlaghatta : ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ದೀಪಾವಳಿ ಹಬ್ಬದ ಸಿಹಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ರಾಜೀವ್ ಗೌಡ ಅವರು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಭಿನ್ನ ನಿಗಮ ಮಂಡಳಿ ಮತ್ತು ಸಮಿತಿಗಳಲ್ಲಿ ನಾಮನಿರ್ದೇಶನ ನೀಡುವ ವಿಚಾರ ಪ್ರಸ್ತಾಪಿಸಿದರು. ಈಗಾಗಲೇ ಕೆಲ ಸ್ಥಾನಗಳಿಗೆ ನಾಮನಿರ್ದೇಶನ ಮಾಡಿರುವುದಾಗಿ ತಿಳಿಸಿ, ಪಕ್ಷಕ್ಕಾಗಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಕೂಡ ಅವಕಾಶ ನೀಡುವಂತೆ ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಕಿ ಇರುವ ಎಲ್ಲ ಸಮಿತಿಗಳಿಗೂ ಶೀಘ್ರದಲ್ಲೇ ನಾಮನಿರ್ದೇಶನ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ, ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಂಘಟಿತವಾಗಿ ಸಿದ್ಧತೆ ನಡೆಸುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ನರೇಂದ್ರ, ದೊಡ್ಡತೇಕಹಳ್ಳಿ ಮೂರ್ತಿ, ಆನೂರು ಚಲಪತಿ, ಮನು, ಶ್ರೇಯಸ್ ಮತ್ತು ಅನಿಲ್ ಉಪಸ್ಥಿತರಿದ್ದರು.