Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯದಲ್ಲಿ ಕಕ್ಷಿದಾರರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವುದರಿಂದ ಪರಸ್ಪರರ ನಡುವೆ ವೈಷಮ್ಯ ಇಲ್ಲದಾಗಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ನೆಮ್ಮದಿಯ ಹಾಗೂ ಶಾಂತಿಯುತ ಬದುಕಿಗೂ ಇದು ಕಾರಣವಾಗಲಿದೆ ಎಂದು ಹೇಳಿದರು.
ಶಿಡ್ಲಘಟ್ಟ ನ್ಯಾಯಾಲಯದಲ್ಲಿ ಒಟ್ಟು 693 ಪ್ರಕರಣಗಳು ಇತ್ಯರ್ಥಗೊಂಡು, 1,69,64,235 ರೂ ಸಂದಾಯವಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ. ಎಸ್ ಅವರು ಕಾರ್ಯನಿರ್ವಹಿಸಿ ಲೋಕ ಅದಾಲತ್ ನಲ್ಲಿ ಹಲವು ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ವಕೀಲರಾದ ಕೆ. ಎಂ. ನಾಗಮಣಿ, ಆರ್.ಶರತ್ ಕುಮಾರ್, ವರುಣ ಕಾರ್ಯನಿರ್ವಹಿಸಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.