Sidlaghatta : “ಈ ನಾಡಿನ ಪ್ರತಿಯೊಬ್ಬ ಕಕ್ಷಿದಾರನಿಗೂ ತ್ವರಿತ ಮತ್ತು ಅಗ್ಗದ ನ್ಯಾಯ ದೊರಕುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ವಕೀಲರ ಸಹಕಾರದಿಂದಲೇ ಈ ಗುರಿ ಸಾಧಿಸಬಹುದು,” ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ಹೇಳಿದರು.
ನಗರದ ನ್ಯಾಯಾಲಯಕ್ಕೆ ಶುಕ್ರವಾರ ಆಗಮಿಸಿದ ಅವರು ವಕೀಲರೊಂದಿಗೆ ಮಾತುಕತೆ ನಡೆಸಿದರು.
“ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವುದೇ ನಿಜವಾದ ಸೇವೆ. ವಕೀಲರು ಈ ದೃಷ್ಟಿಯಲ್ಲಿ ಕೆಲಸ ಮಾಡಿದರೆ ನಿಮ್ಮ ಖ್ಯಾತಿಯೂ, ಕಕ್ಷಿದಾರರ ವಿಶ್ವಾಸವೂ ಹೆಚ್ಚಾಗುತ್ತದೆ. ವರ್ಷಾನುಗಟ್ಟಲೆ ನ್ಯಾಯಾಲಯದ ಸುತ್ತ ಸುತ್ತುವ ಕಾಲ ಹೋಯಿತು; ಈಗ ಕಾಲ ಬದಲಾಗಿದೆ, ನ್ಯಾಯದಾನದಲ್ಲಿ ವೇಗ, ತಂತ್ರಜ್ಞಾನ ಮತ್ತು ಸೌಹಾರ್ದತೆ ಅಗತ್ಯ,” ಎಂದು ಹೇಳಿದರು.
“ಮುಂದಿನ ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯದ ಮಾದರಿಯನ್ನಾಗಿಸಬೇಕು. ಇದಕ್ಕಾಗಿ ಎಲ್ಲಾ ವಕೀಲರು ಸಂಪೂರ್ಣ ಸಹಕಾರ ನೀಡಬೇಕು,” ಎಂದು ವಕೀಲರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಸುಕನ್ಯಾ ಸಿ.ಎಸ್, ಹಿರಿಯ ವಕೀಲ ಎಂ. ಪಾಪಿರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಹಾಗೂ ಅನೇಕ ವಕೀಲರು ಹಾಜರಿದ್ದರು.








