ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ರೈತರಿಗೆ ತಲುಪಿಸುವ ಸಲುವಾಗಿ ಆರಂಭಿಸಿರುವ ಬೆಳೆ ಸಮೀಕ್ಷೆ ಯೋಜನೆಯನ್ನು ಯಶಸ್ವಿಗೊಳಿಸಲು ರೈತರು ಸಹಕರಿಸಬೇಕೆಂದು ತಹಶೀಲ್ದಾರ್ ಕೆ.ಅರುಂಧತಿ ಮನವಿ ಮಾಡಿದರು.
ಬಶೆಟ್ಟಹಳ್ಳಿ ಹೋಬಳಿಯ ಗಡಿಮಿಂಚೇನಹಳ್ಳಿ ಹಾಗೂ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತರ ತೋಟದಲ್ಲಿ ಬೆಳೆ ಸಮೀಕ್ಷೆ ನಡೆಸಿ ಮಾತನಾಡಿದ ಅವರು ರೈತರು ತಮ್ಮ ತಮ್ಮ ಮೊಬೈಲ್ ಮೂಲಕ ಕೃಷಿ ಇಲಾಖೆ ಸಿದ್ದಪಡಿಸಿರುವ ಆಪ್ ಬಳಸಿಕೊಂಡು ಬೆಳೆಯನ್ನು ನೊಂದಣಿ ಮಾಡಿಸಿಕೊಂಡಲ್ಲಿ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ರೈತರಲ್ಲಿ ಅರಿವು ಮೂಡಿಸಿದರು.
ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆಯಲ್ಲಿ ಒಂದಾದ ಬೆಳೆ ಸಮೀಕ್ಷೆಯಲ್ಲಿ ಶೇಕಡ ನೂರರಷ್ಟು ಪ್ರಗತಿ ಸಾಽಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ರೈತ ಮುಖಂಡರೊಂದಿಗೆ ಬೆಳೆ ಸಮೀಕ್ಷೆ ಅಭಿಯಾಯನ ಕುರಿತು ಸಭೆ ನಡೆಸಿ ಸಮಾಲೋಚನೆ ನಡೆಸಿದ್ದೇವೆ. ಜೊತೆಗೆ ರೈತರ ತೋಟಗಳಿಗೆ ಭೇಟಿ ನೀಡಿ ರೈತರಿಂದಲೇ ಬೆಳೆ ಸಮೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್ ಮಾತನಾಡಿ, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಬೆಳೆ ಸಮೀಕ್ಷೆ ಯೋಜನೆಯನ್ನು ಯಶಸ್ವಿಗೊಳಿಸಲು ರೈತರು ಸಹ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೂ ಹೆಚ್ಚಾಗಿ ಸಹಕಾರ ನೀಡಿ ಇಲಾಖೆ ನೀಡಿರುವ ಅವಧಿಯೊಳಗೆ ಬೆಳೆ ಸಮೀಕ್ಷೆ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕೋರಿದರು.







