Home News ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ – ಸಾವಿನ ತನಿಖೆಗೆ ಆಗ್ರಹ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ – ಸಾವಿನ ತನಿಖೆಗೆ ಆಗ್ರಹ

0
Sidlaghatta Death by hanging

ಶಿಡ್ಲಘಟ್ಟ ತಾಲ್ಲೂಕು ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಕುತ್ತಾಂಡಹಳ್ಳಿಯ ಪ್ರಕಾಶ್(40) ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು ನಮ್ಮ ತಂದೆಯದ್ದು ಅನುಮಾನದ ಸಾವು ಎಂದು ಮೃತನ ಪುತ್ರ ನಯನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಮೃತ ಪ್ರಕಾಶ್ ಅವರ ಹುಳು ಸಾಕಣೆ ಮನೆ ಮುಂದೆ ಅದೇ ಗ್ರಾಮದ ನವೀನ್ ಎನ್ನುವವರ ತೋಟಕ್ಕೆ ಪೈಪ್ ಲೈನ್ ಹಾದು ಹೋಗಿದ್ದು ಮಂಗಳವಾರ ಬೆಳಗ್ಗೆ ಸುಮಾರು ಏಳು ಗಂಟೆಯಲ್ಲಿ ನವೀನ್ ಪೈಪ್‌ನ ದುರಸ್ತಿ ಕಾರ‍್ಯ ನಡೆಸುತ್ತಿದ್ದ. ನವೀನ್ ಇದ್ದಲ್ಲಿಗೆ ಬಂದ ಪ್ರಕಾಶ್ ಐದಾರು ವರ್ಷಗಳ ಹಿಂದೆ ನಡೆದಿದ್ದ ಗಲಾಟೆಯೊಂದನ್ನು ಪ್ರಸ್ತಾಪಿಸಿದ್ದಾನೆ.

ನನ್ನನ್ನು ಊರ ಮದ್ಯದ ಕಂಬಕ್ಕೆ ಕಟ್ಟಿ ಹಾಕಲು ಹಗ್ಗ ತಂದು ಕೊಟ್ಟಿದ್ದು ನೀನೇ ಅಲ್ಲವೆ ಎಂದು ತಗಾದೆ ತೆಗೆದಿದ್ದಾನೆ. ಮತ್ತೆ ಹುಳು ಮನೆಗೆ ಹೋಗಿ ಮಚ್ಚನ್ನು ತೆಗೆದುಕೊಂಡು ಬಂದು ನವೀನ್ ಮೇಲೆ ಬೀಸಿದ್ದಾನೆ. ನವೀನ್‌ನ ಕೈಗೆ ಮಚ್ಚೇಟು ಬಿದ್ದಿದೆ.

ಅಷ್ಟರಲ್ಲಿ ಅಲ್ಲಿ ಜನ ಜಮಾಯಿಸತೊಡಗಿದ್ದಾರೆ. ಪ್ರಕಾಶ್ ಪುತ್ರ ನಯನ್ ಸಹ ಅಲ್ಲಿಗೆ ಬಂದಿದ್ದಾನೆ. ಆಗ ಗಾಯಗೊಂಡಿದ್ದ ನವೀನ್, ಏನೋ ನಿಮ್ಮಪ್ಪ ನನ್ನನ್ನು ಮಚ್ಚಿನಿಂದ ಸಾಯಿಸಲು ಬಂದಿದ್ದ. ಕತ್ತಿನ ಭಾಗಕ್ಕೆ ಮಚ್ಚು ಬೀಸಿದನಾದರೂ ನಾನು ತಪ್ಪಿಸಿಕೊಂಡಿದ್ದರಿಂದ ನನ್ನ ಕೈಗೆ ಬಿದ್ದಿದೆ. ನಾನು ನಿಮ್ಮಪ್ಪನ ಮೇಲೆ ಕಂಪ್ಲೆಂಟ್ ಕೊಡ್ತೇನೆ ಎಂದು ಹೇಳಿದ್ದು ನಯನ್ ಆಯ್ತಣ್ಣಾ ನಿಮ್ಮಿಷ್ಟ ಏನಾದರೂ ಮಾಡಿಕೊಳ್ಳಿ ಎಂದು ಅಲ್ಲಿಂದ ಮನೆಯತ್ತ ಹೊರಟಿದ್ದಾನೆ.

ಈ ಸಮಯದಲ್ಲಿ ಪ್ರಕಾಶ್‌ನ ಪತ್ನಿ ಹಾಗೂ ಪುತ್ರಿ ಮನೆಯಲ್ಲಿ ಇರದೆ ಸಂಬಂಧಿಕರ ಊರಿಗೆ ಹೊರಟಿದ್ದರು. ಅವರನ್ನು ಕರೆತರಲೆಂದು ನಯನ್ ಊರಿಗೆ ಹೋಗಿ ಸುಮಾರು 10 ಗಂಟೆ ವೇಳೆಗೆ ಕರೆತಂದಿದ್ದಾನೆ. ಬಂದವರೆ ಪ್ರಕಾಶ್‌ನನ್ನು ಹುಡುಕಾಡಿದ್ದು ಈ ವೇಳೆ ಹುಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಕಾಶ್ ಕಾಣಿಸಿಕೊಂಡ ಎಂದು ಕುಟುಂಬದವರು ದೂರಿದ್ದಾರೆ.

ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಇತ್ತ ಗಾಯಗೊಂಡಿದ್ದ ನವೀನ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version