Sidlaghatta : ಹಲವು ವರ್ಷಗಳಿಂದಲೂ ಬಗರ್ ಹುಕುಂ ದರಕಾಸ್ತು ಸಮಿತಿ ರಚನೆಯಾಗದ ಕಾರಣ ಸಾವಿರಾರು ಮಂದಿ ರೈತರಿಗೆ ತೊಂದರೆ ಆಗುತ್ತಿದೆ. ಭೂಮಿ ವಂಚಿತರಾಗುವಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅನೇಕ ವರ್ಷಗಳಿಂದಲೂ ದರಕಾಸ್ತು ಸಮಿತಿ ರಚನೆ ಆಗಿಲ್ಲ. ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿ ಜೆ.ಡಿ.ಎಸ್ ನ ಶಾಸಕರು ಇದ್ದಾರೆ. ಹಾಗಾಗಿ ಸಮಿತಿ ರಚನೆ ಆಗಿಲ್ಲ ಎನ್ನುತ್ತಾರೆ.
ಜತೆಗೆ ಕಾಂಗ್ರೆಸ್‌ನಲ್ಲಿ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಹಾಗೂ ಮಾಜಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಬಣಗಳಿದ್ದು ಈ ಮೂರು ಬಣಗಳ ನಡುವೆ ದರಕಾಸ್ತು ಸಮಿತಿಗೆ ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಸೂಚಿಸುವಲ್ಲಿ ಒಮ್ಮತ ಮೂಡದ ಕಾರಣ ದರಕಾಸ್ತು ಸಮಿತಿಗೆ ನೇಮಕಾತಿ ಆಗಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಈ ಎರಡರಲ್ಲಿ ಯಾವುದೆ ಕಾರಣಕ್ಕಾಗಲಿ ದರಕಾಸ್ತು ಸಮಿತಿ ರಚನೆ ಆಗದಿದ್ದರೂ ತೊಂದರೆ ಮಾತ್ರ ರೈತರಿಗೆ ಆಗುತ್ತಿದೆ. ಅನೇಕ ವರ್ಷಗಳಿಂದಲೂ ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡು ತಾವು ಸ್ವಾಧೀನದಲ್ಲಿದ್ದು ಕೃಷಿ ನಡೆಸುತ್ತಿರುವವರು ಜಮೀನು ಮಂಜೂರಿಗಾಗಿ ಬಕ ಪಕ್ಷಿಗಳಂತೆ ಕಾದಿದ್ದಾರೆ ಎಂದರು.
ರಾಜಕೀಯ ಕಾರಣಕ್ಕೋ ಇಲ್ಲವೇ ರೈತರ ಬಗ್ಗೆ ನಿರ್ಲಕ್ಷ್ಯಕ್ಕೋ ದರಕಾಸ್ತು ಸಮಿತಿ ರಚನೆ ಆಗದೆ ರೈತರಿಗೆ ತೊಂದರೆ ಆಗುವುದಕ್ಕೆ ನಾವು ಬಿಡುವುದಿಲ್ಲ. ಕೂಡಲೆ ಸಮಿತಿ ರಚನೆ ಆಗಬೇಕು, ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಸಮಿತಿ ಇಲ್ಲದಿರುವಾಗ ಜಿಲ್ಲಾಧಿಕಾರಿಗಳೆ ಸಭೆ ನಡೆಸಿ ನಿಯಮದಂತೆ ಭೂಮಿ ಮಂಜೂರು ಮಾಡಲು ಅವಕಾಶವಿದ್ದು ಆ ಕೆಲಸವಾದರೂ ಆಗಬೇಕೆಂದು ಒತ್ತಾಯಿಸಿದರು.
ಇನ್ನು ಕೆಐಎಡಿಬಿಯು, ಯಾರು ಜಮೀನನ್ನು ಬಿಟ್ಟುಕೊಡಲು ಸಿದ್ದರಿದ್ದಾರೋ ಅಂತಹ ರೈತರ ಜಮೀನನ್ನು ಮಾತ್ರವೇ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಪ್ರದೇಶ ಅಭಿವೃದ್ದಿ ಪಡಿಸಲು ನಮ್ಮ ಅಭ್ಯಂತರವಿಲ್ಲ. ಇನ್ನು ಯಾರು ಜಮೀನು ನೀಡುವುದಿಲ್ಲವೋ ಅವರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಸರ್ಕಾರ, ಕೆಐಎಡಿಬಿಯು ಅಧಿಕೃತವಾಗಿ ಪ್ರಕಟಣೆ ಹೊರಡಿಸಿ ರೈತರಲ್ಲಿನ ಆತಂಕವನ್ನು ದೂರ ಮಾಡಬೇಕೆಂದು ಅವರು ಒತ್ತಾಯಿಸಿದರು.
ದಸಂಸ ತಾಲ್ಲೂಕು ಸಂಚಾಲಕ ದೊಡ್ಡ ತಿರುಮಲಯ್ಯ, ಸಂಘಟನಾ ಸಂಚಾಲಕರಾದ ನರೇಶ್, ರಾಜ್‌ಕುಮಾರ್, ಎನ್.ದ್ಯಾವಪ್ಪ, ಅರುಣ ಹಾಜರಿದ್ದರು.







