
Sidlaghatta : ಸರಕಾರವು ತಾಲೂಕಿನಲ್ಲಿ ದರಕಾಸ್ತು ಸಮಿತಿ ರಚಿಸದ ಕಾರಣ ಭೂಮಿ ಮಂಜೂರಾತಿಗಾಗಿ ರೈತರು ಸಲ್ಲಿಸಿದ ಸಾವಿರಾರು ಅರ್ಜಿಗಳು ಬಾಕಿಯಿದ್ದು ರೈತರಿಗೆ ಸರಕಾರ ಭೂಮಿ ಮಂಜೂರು ಮಾಡದೆ ದ್ರೋಹ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ದೂರಿದರು.
ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವ ಕಾರಣಕ್ಕೆ ಸರಕಾರವು ತಾಲೂಕಿನಲ್ಲಿ ದರಕಾಸ್ತು ಸಮಿತಿ ರಚಿಸಿಲ್ಲ ಎಂಬುದು ಗೊತ್ತಿಲ್ಲ. ಇದರಿಂದ ಅನೇಕ ವರ್ಷಗಳಿಂದಲೂ ಭೂಮಿ ಮಂಜೂರಿಗಾಗಿ ಅರ್ಜಿ 50, 51, 53 ಹಾಗೂ 57ನ್ನು ಹಾಕಿಕೊಂಡು ಕಾದಿರುವ ಭೂರಹಿತ ರೈತರಿಗೆ ಮೋಸ ಅನ್ಯಾಯ ಆಗುತ್ತಿರುವುದಂತೂ ಬೇಸರದ ಸಂಗತಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವಿದ್ದು ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಶಾಸಕರಿರುವ ಕಾರಣವಾ ಅಥವಾ ಸ್ಥಳೀಯ ಕಾಂಗ್ರೆಸ್‍ನಲ್ಲಿ ಇಬ್ಬರು ನಾಯಕರ ಒಳ ಜಗಳದಿಂದ ದರಕಾಸ್ತು ಸಮಿತಿ ರಚನೆಗೆ ನಾಮ ನಿರ್ದೇಶಕರನ್ನು ಸೂಚಿಸಲು ಒಮ್ಮತ ಮೂಡದೆ ದರಕಾಸ್ತು ಸಮಿತಿ ರಚನೆ ಆಗಿಲ್ಲವಾ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾದ ಹಣ ಬೇರೆ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಎಸ್‍ಸಿಪಿ, ಎಸ್‍ಟಿಪಿ ಯೋಜನೆಯಲ್ಲಿ ಸಾಕಷ್ಟು ಹಣ ದುರ್ಬಳಕೆ ಆಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಎಸ್‍ಸಿ ಹಾಗೂ ಎಸ್‍ಟಿ ವರ್ಗಗಳಿಗೆ ಸಂಬಂಸಿದಂತೆ ಕೈಗೊಂಡ ಕಾಮಗಾರಿ, ಮನ್ರೇಗಾ ಇನ್ನಿತರೆ ಯೋಜನೆಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದರೆ ಮಾಹಿತಿಯನ್ನು ಕೊಡುತ್ತಿಲ್ಲ ಎಂದು ದೂರಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಬೇರೆ ಬೇರೆ ರೂಪಗಳಲ್ಲಿ ಅಸ್ಪಶ್ಯತೆ ಇನ್ನೂ ಆಚರಣೆಯಲ್ಲಿದೆ. ಜಾತಿ ತಾರತಮ್ಯ ಹೋಗುವ ಲಕ್ಷಣಗಳೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಂದಗಾನಹಳ್ಳಿಯಲ್ಲಿ ನಿವೇಶನರಹಿತ ದಲಿತರಿಗೆ ಸೀತಹಳ್ಳಿ ಸರ್ವೆ ನಂಬರ್ 29ರಲ್ಲಿ 23 ಗುಂಟೆ ಜಾಗದಲ್ಲಿ ನಿವೇಶನಗಳನ್ನು ನೀಡಬೇಕು, ಗ್ರಾಮಗಳಲ್ಲಿ ಸಾಮಾನ್ಯ ದಿನಸಿ ಅಂಗಡಿ, ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದ್ದು ಯುವಕರು ಕುಡಿತದಿಂದ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿದ್ದು ಮದ್ಯ ಮಾರಾಟಕ್ಕೆ ತಡೆ ಹಾಕಬೇಕು ಎಂದು ಒತ್ತಾಯಿಸಿದರು.
ಮೇಲೂರು ಗಾಮದಲ್ಲಿ ನಿವೇಶನ ರಹಿತ ದಲಿತರಿಗೆ ನಿವೇಶನಗಳನ್ನು ನೀಡಬೇಕು, ಸಾಕಷ್ಟು ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲ. ಸ್ಮಶಾನ ಇದ್ದರೂ ಸರಿಯಾದ ದಾರಿಯಿಲ್ಲ. ಸೂಕ್ತ ಸ್ಮಶಾನದ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತರಿಗೆ ಮಂಜೂರಾದ ಭೂಮಿಯನ್ನು ದಲಿತರು ಮಾರಾಟ ಮಾಡಿದ್ದರೂ ಅದನ್ನು ವಾಪಸ್ ಮಾಡಬೇಕು ಎನ್ನುವ ಕಾನೂನು ಇದ್ದರೂ ಅದಿಕಾರಿಗಳು ಆ ವಿಚಾರದಲ್ಲಿ ಕಾನೂನನ್ನು ಮೀರಿ ಆದೇಶ ಮಾಡುತ್ತಿದ್ದು ಅದನ್ನ ಪ್ರಶ್ನಿಸಿದರೆ ನಾವು ಮಾಡಿರುವ ಆದೇಶ ಸರಿಯಿಲ್ಲ ಎಂದಾದರೆ ಮೇಲ್ಮನವಿ ಸಲ್ಲಿಸಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಷ್ಟ್ 14ರ ರಾತ್ರಿ ಶಿಡ್ಲಘಟ್ಟ ನಗರದಲ್ಲಿ ಪಂಜಿನ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ತೊಟ್ಲಿಗಾನಹಳ್ಳಿ ದ್ಯಾವಪ್ಪ, ಎ.ಎಲ್.ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಗೊರ್ಲಪ್ಪ, ಸೊಣ್ಣಪ್ಪ, ಮುತ್ತಕಪಲ್ಲಿ ನಾರಾಯಣಸ್ವಾಮಿ, ತೋಕಲಹಳ್ಳಿ ಆಂಜಿನಪ್ಪ, ಹೇಮಾರ್ಲಹಳ್ಳಿ ಮುನಿಯಪ್ಪ, ಮಾರಪ್ಪ, ನೇರಳೆಮರದಹಳ್ಳಿ ಮುನಿನಾರಾಯಣಪ್ಪ ಇನ್ನಿತರರು ಹಾಜರಿದ್ದರು.