ಶಿಡ್ಲಘಟ್ಟ ನಗರದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ವೃದ್ದ ದಂಪತಿಯನ್ನು ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಅಲಿಯಾಸ್ ದೊಂತಿ ಸೀನಪ್ಪ(76), ಪತ್ನಿ ಪದ್ಮಾವತಿ(67) ಕೊಲೆಯಾದ ದುರ್ದೈವಿಗಳು.
ಮನೆಯಲ್ಲಿ ಇಬ್ಬರಷ್ಟೆ ವಾಸಿಸುತ್ತಿದ್ದು, ಹಣ ಚಿನ್ನಾಭರಣಗಳಿಗಾಗಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿನ ಬೀರು ಕಪಾಟುವನ್ನು ಕಿತ್ತು ಬಟ್ಟೆ ಬರೆಯನ್ನು ಚೆಲ್ಲಾಡಿದ್ದು ಹಣ ಚಿನ್ನಾಭರಣಗಳನ್ನು ಕದ್ದೊಯ್ದಿದ್ದು, ಎಷ್ಟು ಎಂಬುದರ ನಿಖರ ಮಾಹಿತಿ ಇಲ್ಲ.
ಹಳೆಯ ಮನೆ ಇದಾಗಿದ್ದು ಮನೆಯ ಮೇಲ್ಚಾವಣಿಯಲ್ಲಿನ ಗವಾಕ್ಷಿ(ಮನೆಯೊಳಗೆ ಬೆಳಕಿಗಾಗಿ ಕಿಂಡಿ) ಮೂಲಕ ಮನೆಯೊಳಗೆ ಕೊಲೆಗಾರರು ನುಸುಳಿ ಈ ದುಷ್ಕೃತ್ಯ ನಡೆಸಿದ್ದಾರೆ.
ಪದ್ಮಾವತಿ ಅವರ ತಲೆ ಹಿಡಿದು ಬಾಗಿಲ ವಸಲಿಗೆ ಹಣೆಯನ್ನು ಚಚ್ಚಿದ ರೀತಿಯಲ್ಲಿದ್ದರೆ, ಶ್ರೀನಿವಾಸ್ ಅವರ ತಲೆಗೆ ಮಾರಕಾಯುಧದಿಂದ ಹೊಡೆದ ರೀತಿಯಲ್ಲಿ ಇಬ್ಬರ ಹೆಣಗಳೂ ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಶ್ರೀನಿವಾಸ್ ಅವರ ಮೈ ಮೇಲೆ ಬಟ್ಟೆಗಳು ಇರಲಿಲ್ಲ.
ಬುಧವಾರ ರಾತ್ರಿ ಸುಮಾರು 10.30 ರ ಆಸುಪಾಸಿನಲ್ಲಿ ಶ್ರೀನಿವಾಸ್ ಹಾಗೂ ಪದ್ಮಾವತಿ ದಂಪತಿಗಳು ಮನೆಯಲ್ಲಿ ಮಾತನಾಡಿಕೊಳ್ಳುವ ಸದ್ದು ಅಕ್ಕ ಪಕ್ಕದವರು ಸಹಜವಾಗಿ ಕೇಳಿಸಿಕೊಂಡಿದ್ದಾರೆ. ಹಾಗಾಗಿ ನಡು ರಾತ್ರಿಯ ನಂತರ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಮನೆಯೊಳಗೆ ಪ್ರವೇಶ ಮಾಡಿದಾಗ ಶವದ ಮೇಲೆ ಇರುವೆಗಳು ಓಡಾಡುತ್ತಿದ್ದು ಕೊಲೆಯಾಗಿ 8-10 ಗಂಟೆಗಳಿಗೂ ಹೆಚ್ಚು ಸಮಯ ಆಗಿರಬಹುದೆಂದು ಅಂದಾಜಿಸಲಾಗಿದೆ.
ಮನೆ ಕೆಲಸದಾಕೆ ಗುರುವಾರ ಬೆಳಗ್ಗೆ ಬಂದು ಬಾಗಿಲು ಬಡಿದರೂ ಬಾಗಿಲು ತೆಗೆಯದೆ ಇದ್ದಾಗ ಹಿಂಬಾಗಿಲ ಮೂಲಕ ಮನೆಯೊಳಗೆ ತೆರಳಿದಾಗ ಶ್ರೀನಿವಾಸಪ್ಪ ಮನೆಯೊಳಗೆ ಬಿದ್ದಿದ್ದು ಕಂಡು ಭಯಗೊಂಡು ಹೊರಗೆ ಬಂದು ಅಕ್ಕ ಪಕ್ಕದವರಿಗೆ ತಿಳಿಸಿದ್ದಾಳೆ.
ಅಕ್ಕಪಕ್ಕದವರು ಮನೆ ಒಳಗೆ ಹೋಗಿ ನೋಡಿದಾಗ ಶ್ರೀನಿವಾಸ್ ಮತ್ತು ಪದ್ಮಾವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ.
ಪದ್ಮಾವತಿ ಶ್ರೀನಿವಾಸ್ ದಂಪತಿಗಳಿಗೆ ಹೆಣ್ಣು ಮಕ್ಕಳಿಬ್ಬರಿದ್ದು, ಮದುವೆ ನಂತರ ಇಬ್ಬರೂ ಹೆಣ್ಣು ಮಕ್ಕಳು ಬೆಂಗಳೂರಲ್ಲಿ ನೆಲೆಸಿದ್ದಾರೆ. ಹಾಗಾಗಿ ವೃದ್ದ ದಂಪತಿಗಳಿಬ್ಬರಷ್ಟೆ ಮನೆಯಲ್ಲಿ ವಾಸವಿದ್ದರು. ವಾಸವಿ ರಸ್ತೆಯಲ್ಲಿನ ಜವಳಿ(ಬಟ್ಟೆ) ಅಂಗಡಿಯನ್ನು ನಡೆಸುತ್ತಿದ್ದ ಶ್ರೀನಿವಾಸ್, ಬಟ್ಟೆ ಅಂಗಡಿ ಸೀನಪ್ಪ ಎಂದೆ ಚಿರಪರಿಚಿತರಾಗಿದ್ದರು. ಶಿಡ್ಲಘಟ್ಟ ನಗರದಲ್ಲಿನ ತುಂಬಾ ಹಳೆಯದಾದ ದೊಂತಿಯವರ ಛತ್ರದ ಮಾಲೀಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು. ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಪುರುಷೋತ್ತಮ್, ಎಸ್‌ಐ ಸತೀಶ್ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಹಿರಿಯ ದಂಪತಿಗಳಿಬ್ಬರ ಜೋಡಿ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದರು. ವೃದ್ದ ದಂಪತಿಗಳ ಕೊಲೆಗೆ ಒಂದು ಕಡೆ ಅಚ್ಚರಿ ಇನ್ನೊಂದು ಕಡೆ ಆತಂಕದ ಮಾತುಗಳು ಕೇಳಿ ಬಂದವು.
ಹಿರಿಯ ದಂಪತಿಯ ಕೊಲೆಯಾಗಿದ್ದು ಹಣ ಚಿನ್ನಾಭರಣಗಳಿಗಾಗಿ ಕೊಲೆ ಮಾಡಿರಬಹುದು. ಆದರೆ ಎಲ್ಲ ರೀತಿಯ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಎಸ್‌ಐ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗುತ್ತದೆ. ಡಿವೈಎಸ್ಪಿ ಅವರೆ ಈ ಮೂರು ತಂಡಗಳ ಉಸ್ತುವಾರಿ ವಹಿಸಲಿದ್ದಾರೆ. -ಮಿಥುನ್ ಕುಮಾರ್, SP