Sidlaghatta : 2026-27 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು ರೈತರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಸ್.ಅಬೀದ್ ಮನವಿ ಮಾಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿ ರೈತರ ಕುಂದು ಕೊರತೆಗಳನ್ನು ಆಲಿಸಿ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 7 ಬೆಳೆಗಳು ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 9 ಪ್ರಮುಖ ಬೆಳೆಗಳು ಕುರಿತಂತೆ ತಾಲ್ಲೂಕುವಾರು ಮತ್ತು ಗ್ರಾಮ ಪಂಚಾಯತಿಯವರು ಈಗಾಗಲೇ ನೋಟಿಫಿಕೇಶನ್ ಮಾಡಲಾಗಿದೆ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮೂಲಕ ಶೇಕಡ 2ರಷ್ಟು ವಿಮಾ ಕಂತನ್ನು ಪಾವತಿಸಿ ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರಗಾಲದ ಸ್ಥಿತಿ ಬರುವ ಮುನ್ಸೂಚನೆ ಕಂಡುಬಂದಿದೆ ವಿಮಾ ಸೌಲಭ್ಯಗಳ ಮೂಲಕ ಅನುಕೂಲ ಮಾಡಿಕೊಳ್ಳಬೇಕೆಂದು ವಿನಂತಿಸಿದರು.
ಮುಖ್ಯ ಬೆಳೆಗಳಿಗೆ ಬಿತ್ತನೆ ಮಾಡಲು ಸಾಧ್ಯ ಆಗಲಿಲ್ಲ ಎಂದರೆ ಶೇಕಡಾ 25 ರಷ್ಟು ಮಾತ್ರ ಬಿತ್ತನೆ ಆಯಿತು, ಬಿತ್ತನೆ ವಿಫಲ, ಅಥವಾ ಬೆಳೆಗಳು ಒಣಗಿ ಹೋದರೂ ಸಹ ಶೇಕಡ 25ರಷ್ಟು ವಿಮಾ ಸೌಲಭ್ಯ ರೈತರಿಗೆ ಆಗಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಂಡು ವಿಮಾ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿಆರ್ ರವಿ ಇನ್ನಿತರರು ಉಪಸ್ಥಿತರಿದ್ದರು.







