Sidlaghatta : ರಾಜ್ಯ ರೈತ ಸಂಘ(ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಸದಸ್ಯರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮುಂಗಾರು ಮಳೆ ಆಗುತ್ತಿದ್ದು ಕೃಷಿ ಇಲಾಖೆಯಲ್ಲಿ ಅಥವಾ ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಮತ್ತು ಬೀಜಗಳ ಹಂಚಿಕೆಯಲ್ಲಿ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು. ಕೆರೆಗಳು ಮತ್ತು ರಾಜಕಾಲುವೆಗಳು ತಾಲ್ಲೂಕಿನಲ್ಲಿ ಒತ್ತುವರಿಯಾಗಿದ್ದು ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ 10-15 ವರ್ಷಗಳಿಂದ ಸಾಗುವಳಿ ಚೀಟಿ ಕೊಡದೆ, 30 ವರ್ಷಗಳಿಂದ ದುರಸ್ಥಿ ಮಾಡದಿರುವುದರಿಂದ ರೈತರು ತಾಲ್ಲೂಕು ಕಚೇರಿಗೆ ತಿರುಗುವಂತಾಗಿದೆ. ತಕ್ಷಣ ಹಕ್ಕುಪತ್ರ ಕೊಡಿಸಿ ದುರಸ್ಥಿ ಮಾಡಿಕೊಡಬೇಕು.
ಜಂಗಮಕೋಟೆ ಹೋಬಳಿಯಲ್ಲಿ ಕೆ.ಐ.ಡಿ.ಇ.ಬಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರು ಒಪ್ಪಿಗೆಕೊಟ್ಟರೆ ಮಾತ್ರ ವಶಪಡಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ಹೆಚ್ಚಾಗುತ್ತಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಕೆ.ಇ.ಬಿ ಅಧಿಕಾರಿಗಳನ್ನು ಕರೆಸಿ ರೈತರ ಪಂಪ್ ಸೆಟ್ ಗಳಿಗೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಸೂಚಿಸಬೇಕು. ತಾಲ್ಲೂಕಿನಲ್ಲಿ ಗುಂಡುತೋಪುಗಳು ಒತ್ತುವರಿಯಾಗಿದ್ದು, ಸರ್ವೆ ಮಾಡಿಸಿ ಆ ಜಾಗದಲ್ಲಿ ಗಿಡ ನೆಡುವ ಕೆಲಸ ಆಗಬೇಕು.
ಈ ಎಲ್ಲಾ ರೈತ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ರೈತರನ್ನೊಳಗೊಂಡಂತೆ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ(ಕೆ.ಎಸ್.ಪುಟ್ಟಣ್ಣಯ್ಯ ಬಣ) ಜಿಲ್ಲಾ ಅಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಭಕ್ತರಹಳ್ಳಿ ಕೋಟೆ ಚನ್ನೇಗೌಡ, ಶಂಕರನಾರಾಯಣ, ದ್ಯಾವಪ್ಪ, ಕೃಷ್ಣಪ್ಪ, ಶ್ರೀನಾಥ್, ರಾಮಾಂಜಿ, ಲಗುಮಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಲೋಕೇಶ್, ಮನೋಜ್ ಕುಮಾರ್, ಗೌತಮ್, ನಾಗರಾಜ ಹಾಜರಿದ್ದರು.