
Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. MRP ಬೆಲೆಗಿಂತ ಹೆಚ್ಚಿನ ದರ ರೈತರಿಂದ ಪಡೆಯದಂತೆ ಈಗಾಗಲೇ ರಸಗೊಬ್ಬರಗಳ ಮಾರಾಟ ಮಳಿಗೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಆರ್.ರವಿ ತಿಳಿಸಿದ್ದಾರೆ.
ಈಗಾಗಲೇ ಇಲಾಖೆಯಿಂದ ರೈತರಿಗೆ ವಿತರಣೆ ಮಾಡಲು ರಾಗಿ, ಮುಸುಕಿನ ಜೋಳ, ಶೇಂಗಾ, ಅಲಸಂಧಿ ತೊಗರಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ರಾಗಿಯಲ್ಲಿ ಎಂ.ಆರ್-1, ಎಂ.ಆರ್-6, ಎಂ.ಎಲ್ 365, ಮುಸುಕಿನ ಜೋಳದಲ್ಲಿ ನಾಲ್ಕು ತಳಿಗಳು, ಶೇಂಗಾ ಕೆ-6, ಅಲಸಂಧಿ-ಬಿ.ಸಿ.-15, ತೊಗರಿ-ಬಿ.ಸಿ.ಜಿ.-1,2,4,5 ತಳಿಗಳನ್ನು ಇಟ್ಟುಕೊಂಡಿದ್ದೇವೆ. ರೈತರು, ಅಗತ್ಯ ದಾಖಲೆಗಳನ್ನು ಕೊಟ್ಟು ಪಡೆಯಬಹುದಾಗಿದೆ. ಸಾಧ್ಯವಾದಷ್ಟು ಕಾಂಪ್ಲೆಕ್ಸ್ ಗೊಬ್ಬರವನ್ನು ಉಪಯೋಗ ಮಾಡುವಂತೆ ರೈತರಿಗೆ ಸೂಚಿಸಲಾಗಿದೆ.
ರಸಗೊಬ್ಬರ ಮಾರಾಟಕ್ಕೆ ಪರವಾನಗಿ ಪಡೆದುಕೊಂಡಿರುವ ಎಲ್ಲಾ ಅಂಗಡಿಗಳ ಮಾಲೀಕರು, ಕಡ್ಡಾಯವಾಗಿ ದರಪಟ್ಟಿಯನ್ನು ಅಂಗಡಿಗಳ ಮುಂದೆ ಪ್ರದರ್ಶನ ಮಾಡಬೇಕು, ಎಂ.ಆರ್.ಪಿ.ಗಿಂತ ಹೆಚ್ಚು, ತೆಗೆದುಕೊಳ್ಳಬಾರದು, ರೈತರೂ ಸಹಾ ತಾವು ಖರೀದಿಸುವ ರಸಗೊಬ್ಬರಗಳ ಮೂಟೆಗಳ ಮೇಲೆ ಎಂ.ಆರ್.ಪಿ. ಪರಿಶೀಲನೆ ಮಾಡಿಕೊಂಡು ಖರೀದಿ ಮಾಡಿಕೊಳ್ಳಬೇಕು. ಯಾವ ಅಂಗಡಿಗಳಲ್ಲಿ ದರಪಟ್ಟಿಯನ್ನು ಹಾಕುವುದಿಲ್ಲವೋ ಅಂತಹ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ರಸಗೊಬ್ಬರಗಳು, ಒಂದೊಂದು ಕಂಪನಿಯ ಗೊಬ್ಬರ ಒಂದೊಂದು ಬೆಲೆಯಿರುತ್ತದೆ. ಎಲ್ಲಾ ಗೊಬ್ಬರಗಳು ಒಂದೇ ಬೆಲೆ ಇರುವುದಿಲ್ಲ. ರೈತರು, ಮೂಟೆಯ ಮೇಲಿನ ಬೆಲೆಯನ್ನು ನೋಡಿಕೊಂಡು ಖರೀದಿ ಮಾಡುವಂತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.