Home News ಸರ್ಕಾರಿ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ

ಸರ್ಕಾರಿ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ

0
sidlaghatta Government High School

Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆ (Government High School) ಆವರಣದಲ್ಲಿ ಒಸಾಟ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 13.65 ಲಕ್ಷ ರೂ ವೆಚ್ಚದಲ್ಲಿ ಬಾಲಕರು ಹಾಗೂ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮುಖ್ಯಶಿಕ್ಷಕಿ ಕೆ.ಮಂಜುಳ ಅವರು ಮಾತನಾಡಿದರು.

ಸೂಕ್ತ ಕಟ್ಟಡಗಳಿಲ್ಲದ ಹಾಗೂ ದುರಸ್ತಿ ಕಾಣದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಹಳೆಯ ಕಟ್ಟಡ ಕೆಡವಿ ನೂತನವಾಗಿ ನಿರ್ಮಿಸುವುದು ಹಾಗೂ ಶಾಲೆಗೆ ಅಗತ್ಯವಿರುವ ಶೌಚಾಲಯ ಸೇರಿದಂತೆ ಮೂಲಭೂತ ಸವಲತ್ತುಗಳನ್ನೊದಗಿಸುವ ಮೂಲಕ ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಮುಂದಾಗಿರುವ ಒಸಾಟ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹೆಣ್ಣುಮಕ್ಕಳಿಗೆ ಮೂರು ಶೌಚಾಲಯ, ಗಂಡು ಮಕ್ಕಳಿಗೆ ಮೂರು ಶೌಚಾಲಯ ಹಾಗೂ ಆರು ಮೂತ್ರಾಲಯಗಳನ್ನು ಒಸಾಟ್ ಸಂಸ್ಥೆ ನಿರ್ಮಿಸಿಕೊಡುತ್ತಿದೆ. ಜಿಲ್ಲೆಯಲ್ಲಿ ಇದು ಅವರ ಎರಡನೆ ಯೋಜನೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಗ್ರಾಮಾಂತರ ಟ್ರಸ್ಟ್ ಈ ಸಂಸ್ಥೆಯನ್ನು ನಮ್ಮ ಸರ್ಕಾರಿ ಶಾಲೆಗೆ ಕರೆತಂದಿದೆ ಎಂದರು.

ಒನ್ ಸ್ಕೂಲ್ ಅಟ್ ಎ ಟೈಮ್ (ಒಸಾಟ್) ಎಂಬ ಸ್ವಯಂ ಸೇವಾ ಸಂಸ್ಥೆಯು ಅಮೇರಿಕಾ ಮೂಲದ ಭಾರತೀಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಈವರೆಗೂ 79 ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿದೆ. ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬಾಲಕರು ಹಾಗೂ ಬಾಲಕಿಯರಿಗಾಗಿ ನಿರ್ಮಾಣ ಮಾಡುತ್ತಿರುವ ಶೌಚಾಲಯ ಕಟ್ಟಡ ಕಾಮಗಾರಿ ಅವರ 80 ನೆ ಯೋಜನೆಯಾಗಿದೆ ಎಂದರು.

ಒಸಾಟ್ ಸ್ವಯಂಸೇವಕ ಮದನ್ ಪ್ರಸಾದ್ ಮಾತನಾಡಿ, ಕಳೆದ 2003 ರಲ್ಲಿ ಅಮೇರಿಕಾದಲ್ಲಿ ಶುರುವಾದ ಈ ಸಂಸ್ಥೆ 2011 ರಲ್ಲಿ ಭಾರತದಲ್ಲಿ ವಿಸ್ತರಿಸಿತು. ಪ್ರತಿವರ್ಷ ಅಮೇರಿಕ ಮತ್ತು ಭಾರತೀಯ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ದೇಶಾದ್ಯಂತ ಗ್ರಾಮೀಣ ಭಾಗದ ಶಾಲೆಗಳಿಗೆ ಹಂತ ಹಂತವಾಗಿ ನೂತನ ಕಟ್ಟಡ ನಿರ್ಮಿಸುವ ಜೊತೆಗೆ ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಶಾಲೆಗಳ ಪುನರುಜ್ಜೀವನ ಕಾರ್ಯದಲ್ಲಿ ಸಂಸ್ಥೆ ತೊಡಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ವಯಂಸೇವಕರಾದ ಪ್ರಕಾಶ್ ನರಸಿಂಹಮೂರ್ತಿ, ವೀರಣ್ಣಗೌಡ, ಎಚ್.ಎಸ್.ನಾಗೇಶ್, ವಿ.ಎನ್.ನಾಗರಾಜರಾವ್, ವಿ.ಎನ್.ಗುಂಡೂರಾವ್, ನಾಗರಾಜ್, ಸರ್ಕಾರಿ ಪ್ರೌಡಶಾಲೆಯ ಶಿಕ್ಷಕರಾದ ಗೋಪಾಲಕೃಷ್ಣ, ಸಿ.ಎಲ್.ಸತೀಶ್, ಸಯೀದಾ ಇಶ್ರತ್, ನಳಿನಾ, ಕುಸುಮಾ, ಆರ್.ಮಧುಸೂಧನ್, ಗ್ರಾಮಾಂತರ ಟ್ರಸ್ಟ್ ನ ಉಷಾ ಶೆಟ್ಟಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version