
Sidlaghatta : “ಸರ್ಕಾರಿ ಆಸ್ಪತ್ರೇಲಿ ಸ್ತ್ರೀರೋಗ ತಜ್ಞೆ ವೈದ್ಯರಿಲ್ಲ. ಇಲ್ಲಿಗೆ ಹೆರಿಗೆಗೆ ಬಂದರೆ ಕಾಸು ಕೇಳ್ತಾರೆ. ಕಾಸು ಕೊಡದಿದ್ರೆ ಕಾಯಿಸಿ ಕಾಯಿಸಿ ಕೊನೆಗೆ ಹೆರಿಗೆ ಮಾಡದೆ ಜಿಲ್ಲಾ ಆಸ್ಪತ್ರೆಗೆ ಹೋಗು ಅಂತಾರೆ. ಸ್ಕ್ಯಾನಿಂಗ್ ತಂತ್ರಜ್ಞರೂ ಇಲ್ಲಿಲ್ಲ” – ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಮಹಿಳಾ ಆಯೋಗದ ಅಧ್ಯಕ್ಷೆಯ ಮುಂದಿಟ್ಟರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅವರು ಕಾರ್ಯಕ್ರಮದ ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡರು.
ಈ ಎಲ್ಲ ಸಮಸ್ಯೆಗಳಿಂದ ಈ ಆಸ್ಪತ್ರೆಗೆ ಹೆರಿಗೆಗೆಂದು ಬರುವವರ ಸಂಖ್ಯೆಯೆ ತೀರಾ ಕಡಿಮೆ ಆಗಿದೆ. ನೂರಾರು ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿದ್ದ ಇಲ್ಲಿ ಇದೀಗ ತಿಂಗಳಿಗೆ ಹತ್ತಿಪ್ಪತ್ತು ಹೆರಿಗೆಗಳು ಆದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸರಿಯಾಗಿ ಸವಲತ್ತುಗಳು ಸಿಗದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅವರು ಈ ಬಗ್ಗೆ ಆಡಳಿತ ವ್ಯಾದ್ಯಾಧಿಕಾರಿ, ವೈದ್ಯರನ್ನು ಕೇಳಿದರು. ಅವರು ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳ ಬಳಿ ಮಾತನಾಡುವುದಾಗಿ ಹೇಳಿದರು.
ನಂತರ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ಭೇಟಿ ನೀಡಿದ ಅವರು, ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೂಲಿ ಕಾರ್ಮಿಕರನ್ನೇ ಕೇಳಿ ತಿಳಿದುಕೊಂಡರು.
ಈ ವೇಳೆ ಕೂಲಿ ಕಾರ್ಮಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. ಕುದಿಯುವ ಬಿಸಿ ನೀರಿನಲ್ಲಿ ಕೋಲು ಹಿಡಿದು ನೂಲು ತೆಗೆಯಬೇಕು, ಉರಿಯುವ ಸೌದೆಯ ಬಿಸಿ ಮುಂದೆ ಗಂಟೆ ಗಟ್ಟಲೆ ಕೂರಬೇಕು. ಬಿಸಿ, ಉರುವುಲಿಂದ ಬರುವ ಹೊಗೆ, ಧೂಳಿನಿಂದ ಮತ್ತು ಕುದಿಯುವ ರೇಷ್ಮೆ ಗೂಡಿನಿಂದ ಹೊರಹೊಮ್ಮುವ ಹಬೆಯಿಂದ ಉಸಿರಾಟದ ತೊಂದರೆ, ಕ್ಷಯ, ಆಸ್ತಮಾ, ಚರ್ಮ ರೋಗಗಳು, ರಕ್ತದ ಕೊರತೆಯಂತ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡರು.
ರೇಷ್ಮೆ ನೂಲು ಬಿಚ್ಚಾಣಿಕೆಯ ಕೂಲಿ ಕಾರ್ಮಿಕರಿಗೆ ಸರ್ಕಾರವು ಹಲವಾರು ಸವಲತ್ತುಗಳನ್ನು ಒದಗಿಸುತ್ತಿದೆ. ಸೌದೆ ಬದಲಿಗೆ ಇತರೆ ಉಪಕರಗಳಣಗಳ ಮೂಲಕ ನೀರನ್ನು ಕಾಯಿಸುವಂತ ತಂತ್ರಜ್ಞಾನವಿದ್ದು ಆ ಸವಲತ್ತುಗಳನ್ನು ಇಲಾಖೆ ಒದಗಿಸಬೇಕಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಶೀಲ್ದಾರ್ ಎನ್.ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ಪೌರಾಯುಕ್ತೆ ಜಿ.ಅಮೃತ, ಸಿಡಿಪಿಒ ವಿದ್ಯಾ ವಸ್ತ್ರದ್, ಕಾರ್ಮಿಕ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ವೈದ್ಯರಾದ ಡಾ.ವಾಣಿ, ಚಿತ್ರನಟಿ ರಾಜೇಶ್ವರಿ, ಕುಂದಲಗುರ್ಕಿ ಮುನೀಂದ್ರ ಹಾಜರಿದ್ದರು.