Sidlaghatta : ವಿದ್ಯಾರ್ಥಿ ಮತ್ತು ಯುವಜನರು ಈ ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುವಂತಾಗಬೇಕು. ನಮ್ಮ ನಮ್ಮಲ್ಲಿನ ಜಾತಿ, ಧರ್ಮದ ತಾರತಮ್ಯ ಬಿಟ್ಟು ಐಕ್ಯತೆ ಸಾಧಿಸಿದಾಗಲೆ ದೇಶದ ಅಭಿವೃದ್ದಿಯತ್ತ ಸಾಗಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆಯ ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ನಡೆದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಜನರು ಈ ನಾಡನ್ನು ಮುನ್ನೆಡೆಸುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕೇವಲ ಓದು ಬರಹಕ್ಕೆ ಸೀಮಿತವಾಗದೆ ಪ್ರಾಪಂಚಿಕ, ಸಾಮಾಜಿಕ ಜ್ಞಾನದೊಂದಿಗೆ ಸಾಮಾಜಿಕ ಕಳಕಳಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವಂತಾಗಬೇಕೆಂದರು.
ಮಾನವ ಬಂಧುತ್ವ ವೇದಿಕೆಯು ರಾಜ್ಯಾಧ್ಯಂತ ಅನೇಕ ರೀತಿಯ ಕಾರ್ಯಕ್ರಮ, ಚಟುವಟಿಕೆಗಳ ಮೂಲಕ ವಿದ್ಯಾರ್ಥಿ, ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ “ಭಾರತದಲ್ಲಿ ಮಹಿಳಾ ಸಬಲೀಕರಣ” ವಿಷಯವಾಗಿ ಚರ್ಚಾ ಸ್ಪರ್ಧೆ ಹಾಗೂ “ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಿಳಾ ಮಸೂದೆ” ಕುರಿತು ಪ್ರಬಂಧ ಸ್ಪರ್ಧೆ, ಕೈಗೆ ಮೆಹಂದಿ ಹಾಕುವ ಮತ್ತು ರಂಗೋಲೆ ಸ್ಪರ್ಧೆಗಳು ನಡೆದವು. 150ಕ್ಕೂ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಡಾ.ಆದಿನಾರಾಯಣಪ್ಪ, ಉಪನ್ಯಾಸಕಿ ಡಾ.ಸುನಿತ ಹಾಜರಿದ್ದರು.








