ನಟ ಚಿರಂಜೀವಿ ಅವರ ಹುಟ್ಟುಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಚಿರಂಜೀವಿ ಯುವತ ಶಿಡ್ಲಘಟ್ಟ ಘಟಕದ ವತಿಯಿಂದ ಶನಿವಾರ ನಗರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಮತ್ತು ವಿದ್ಯಾರ್ಥಿಗಳಿಗೆ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಶಾಲೆಗೆ ವಾಟರ್ ಫಿಲ್ಟರ್ ನೀಡಲಾಗಿದೆ ಎಂದು ಅಖಿಲ ಕರ್ನಾಟಕ ಚಿರಂಜೀವಿ ಯುವತ ತಾಲೂಕು ಅಧ್ಯಕ್ಷ ಕೆ. ನಾರಾಯಣಸ್ವಾಮಿ ತಿಳಿಸಿದರು.
ಚಿರಂಜೀವಿ ಅವರು ಸ್ಥಾಪಿಸಿರುವ ಬ್ಲಡ್ ಬ್ಯಾಂಕ್ ಮತ್ತು ಐ ಬ್ಯಾಂಕ್ ಸೇರಿದಂತೆ ಸಮಾಜಮುಖಿ ಕಾರ್ಯಗಳಿಂದ ಸ್ಫೂರ್ತಿ ಪಡೆದು ಸಂಘಟನೆಯ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದುಂದು ವೆಚ್ಚದ ಆಚರಣೆಗಳಿಗೆ ಬದಲಾಗಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಅಖಿಲ ಕರ್ನಾಟಕ ಚಿರಂಜೀವಿ ಯುವತ ರಾಜ್ಯ ಸಮಿತಿ ಸದಸ್ಯ ದಿನೇಶ್ ಬಾಬು ಮಾತನಾಡಿ, ಚಿರಂಜೀವಿ ಅವರ ಹುಟ್ಟುಹಬ್ಬವನ್ನು ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುವ ಉದ್ದೇಶದಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಬಾಬು, ಮುಖ್ಯಶಿಕ್ಷಕಿ ನಗೀನಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗರಾಜು, ಸಂಘಟನೆಯ ಸದಸ್ಯರಾದ ವೆಂಕಟರೆಡ್ಡಿ, ವೆಂಕಟರಮಣ, ದೇವರಾಜ್, ರಾಮದಾಸು, ರಾಧಾಕೃಷ್ಣ, ದಾಮೋದರ್, ಬುಜ್ಜಿ ನಾಯಕ್, ಮುನಿಯಪ್ಪ, ಗೋಪಾಲ್, ಮನು ಚರಣ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಇದೇ ರೀತಿ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಉಚಿತ ನೀರಿನ ಟ್ಯಾಂಕ್ ಮತ್ತು ಫಿಲ್ಟರ್ ವಿತರಿಸುವ ಕಾರ್ಯಕ್ರಮವನ್ನು ರೋಟರಿ ಸಂಸ್ಥೆ ಸಹ ಹಮ್ಮಿಕೊಂಡಿತ್ತು.
In English: Marking actor Chiranjeevi’s birthday, the Sidlaghatta unit of Akhila Karnataka Chiranjeevi Yuvatha organization offered special prayers at the Kote Sri Anjaneyaswamy temple on Saturday and donated a water filter along with water bottles for students to a government primary school. Taluk unit president K. Narayanaswamy said the filter was provided to ensure clean drinking water for schoolchildren, adding that the organization draws inspiration from Chiranjeevi’s own social initiatives, including a blood bank and eye bank, and prioritizes such welfare programs over lavish celebrations.







