
ಗ್ರಾಮೀಣ ಭಾಗದ ಜನರಲ್ಲಿ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮವೊಂದರಲ್ಲಿ ಗುರುವಾರ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರಿಗೆ ಈ ತರಬೇತಿ ನೀಡಿದರು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಮಸಾಲಾ ಡೋನಟ್ ಹಾಗೂ ತೆಂಗಿನಕಾಯಿ ಕುಕೀಸ್” ತಯಾರಿಸುವ ಕುರಿತು ಹಂತ ಹಂತವಾಗಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಬೇಕರಿ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಯ್ಕೆ, ಅವುಗಳ ಪ್ರಮಾಣ, ಬಳಕೆಯ ವಿಧಾನ, ಹಿಟ್ಟನ್ನು ಸಿದ್ಧಪಡಿಸುವ ಕ್ರಮ, ಮಿಶ್ರಣ, ಆಕಾರ ನೀಡುವುದು, ಬೇಯಿಸುವ ವಿಧಾನ ಹಾಗೂ ಉತ್ಪನ್ನದ ಗುಣಮಟ್ಟ ಕಾಪಾಡಿಕೊಳ್ಳುವ ಕುರಿತು ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ವಿವರಿಸಿದರು. ತಯಾರಿಕೆಯ ಪ್ರತಿಯೊಂದು ಹಂತವನ್ನೂ ಸ್ಥಳದಲ್ಲಿಯೇ ಪ್ರದರ್ಶಿಸುವ ಮೂಲಕ ಪ್ರಾಯೋಗಿಕ ಅರಿವು ಮೂಡಿಸಲಾಯಿತು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಘಟಕದ ಸಂಯೋಜಕಿ ಡಾ. ಭಾರತಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತೆಂಗಿನಕಾಯಿ ಕುಕೀಸ್ ಮತ್ತು ಮಸಾಲಾ ಡೋನಟ್ ತಯಾರಿಸುವ ವಿಧಾನವನ್ನು ವಿವರವಾಗಿ ತಿಳಿಸಿದರು. ಮನೆಮಟ್ಟದಲ್ಲಿಯೇ ಲಭ್ಯವಿರುವ ಕೆಲವು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ ಎಂದು ಅವರು ತಿಳಿಸಿದರು. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿಧ ಬೇಕರಿ ಮತ್ತು ಆಹಾರ ಸಂಸ್ಕರಣಾ ತರಬೇತಿ ಕಾರ್ಯಕ್ರಮಗಳು, ತರಬೇತಿ ಘಟಕದ ಉದ್ದೇಶ ಹಾಗೂ ಆಸಕ್ತರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಇಂತಹ ತರಬೇತಿಗಳನ್ನು ಪಡೆದು ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸುವ ಮೂಲಕ ಮಹಿಳೆಯರು, ಯುವಕರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡಬಹುದು ಎಂದು ತಿಳಿಸಲಾಯಿತು. ಬೇಕರಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇರುವುದರಿಂದ ಗುಣಮಟ್ಟದ ಉತ್ಪನ್ನಗಳ ತಯಾರಿಕೆ, ಸ್ವಚ್ಛತೆ, ಸೂಕ್ತ ಪ್ಯಾಕಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಯತ್ತಲೂ ಗಮನ ಹರಿಸಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು.
ತರಬೇತಿಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮಸಾಲಾ ಡೋನಟ್ ಹಾಗೂ ತೆಂಗಿನಕಾಯಿ ಕುಕೀಸ್ ತಯಾರಿಕೆಯ ಕುರಿತು ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಗ್ರಾಮೀಣ ಭಾಗದ ಜನರು ಕೃಷಿಯ ಜೊತೆಗೆ ಇಂತಹ ಪೂರಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲು ಹಾಗೂ ಹೆಚ್ಚುವರಿ ಆದಾಯ ಗಳಿಸಲು ಈ ರೀತಿಯ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂತಹುದೇ ಗ್ರಾಮೀಣ ಕೃಷಿ ಕಾರ್ಯಾನುಭವ ಚಟುವಟಿಕೆಯ ಅಂಗವಾಗಿ ಈ ಹಿಂದೆ ಕೃಷಿ ವಿದ್ಯಾರ್ಥಿಗಳು ತಾಲ್ಲೂಕಿನ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
In English: Final-year agriculture students from the University of Agricultural Sciences, Bengaluru, conducted a hands-on bakery training program for rural residents in Sidlaghatta taluk on Thursday, as part of their Rural Agricultural Work Experience Programme. Held at a village Milk Producers Cooperative Society premises, the session demonstrated step-by-step preparation of masala donuts and coconut cookies, covering raw material selection, dough preparation, shaping, and baking. Dr. Bharathi, coordinator of the university’s bakery training unit, explained how small-scale, home-based bakery production using locally available ingredients can help women, youth, and self-help group members build supplementary income and move toward self-employment.











